ದೋಹಾ : ಗಲ್ಫ್ ರಾಷ್ಟ್ರ ಕತಾರ್‌ನ ಪ್ರಮುಖ ಗ್ಯಾಸ್ ಪ್ಲಾಂಟ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದು, 66ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಭಾರತೀಯ ಮೂಲದ ಕಾರ್ಮಿಕರೂ ಸೇರಿದ್ದಾರೆ ಎಂದು ಕತಾರ್ ಇಂಧನ ಸಚಿವ ಸಾದ್ ಶೆರಿದಾ ಅಲ್-ಕಾಬಿ ತಿಳಿಸಿದ್ದಾರೆ.
ಕತಾರ್‌ನ ಕೈಗಾರಿಕಾ ವಲಯದಲ್ಲಿರುವ ಪ್ರಮುಖ ಅನಿಲ ಸಂಸ್ಕರಣಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟವು ಕ್ಷಣಾರ್ಧದಲ್ಲಿ ಭಾರಿ ಅಗ್ನಿ ಅವಘಡಕ್ಕೆ ಕಾರಣವಾಗಿದ್ದು, ಘಟಕದ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ.
ಗಾಯಗೊಂಡ 66 ಮಂದಿಯನ್ನು ದೋಹಾದ ಹಮದ್ ಜನರಲ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.

