ವರದಿ -ಮಂದಾರ ರಾಜೇಶ್
ಮೂಡುಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಹಿರಿಯ ಜ್ಯೋತಿಷಿ, ಧಾರ್ಮಿಕ ಮಾರ್ಗದರ್ಶಕ ಹಾಗೂ ಕಲಾಪೋಷಕರಾಗಿದ್ದ ವೇದಮೂರ್ತಿ ಶ್ರೀ ಈಶ್ವರ ಭಟ್ಟರ ನಿಧನಕ್ಕೆ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಈಶ್ವರ ಭಟ್ಟರು ಅಪಾರ ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು. ಅಲಂಗಾರು ಮಹಾಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿ, ವ್ಯವಸ್ಥಿತ ನಿರ್ವಹಣೆ ಹಾಗೂ ಧಾರ್ಮಿಕ, ಯಕ್ಷಗಾನ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದರು. ಅವರ ನಿಧನದಿಂದ ಜೈನಕಾಶಿ ಮೂಡುಬಿದಿರೆಯ ಧಾರ್ಮಿಕ ಕ್ಷೇತ್ರವು ಅನುಭವಿ ಧಾರ್ಮಿಕ ಮುತ್ಸದ್ದಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಅವರಿಗೆ ಉತ್ತಮ ಸದ್ಗತಿ ಕರುಣಿಸುವಂತೆ ಆರಾಧ್ಯ ದೇವರಾದ ಭಗವಾನ್ ಪಾರ್ಶ್ವನಾಥನಲ್ಲಿ ಪ್ರಾರ್ಥಿಸುವುದಾಗಿ ಸ್ವಾಮೀಜಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

