ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನಕ್ಕೆ ನ. 20 ಕೊನೆಯ ದಿನ
-ಮಂದಾರ ರಾಜೇಶ್
ಸರ್ಕಾರಿ ಶಾಲೆಗಳಲ್ಲಿ ನಿಷ್ಠೆ, ಬದ್ಧತೆ ಹಾಗೂ ಸೃಜನಶೀಲತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪಾಂಚಜನ್ಯ ಪ್ರತಿಷ್ಠಾನವು ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026’ ಸ್ಥಾಪಿಸಿದೆ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಮುರಳಿ ಎಸ್. ಕಾಕೋಳು ತಿಳಿಸಿದ್ದಾರೆ.
ಕರ್ನಾಟಕದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನಿಷ್ಠ 10 ವರ್ಷಗಳ ಬೋಧನಾ ಅನುಭವ ಹೊಂದಿರುವ ಶಿಕ್ಷಕರು ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮೂಲಭೂತ ಸಾಕ್ಷರತೆ, ಸಂಖ್ಯಾಜ್ಞಾನ, ನವೀನ ಬೋಧನಾ ವಿಧಾನಗಳು, ನೈತಿಕ ನಾಯಕತ್ವ ಹಾಗೂ ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಆಯ್ಕೆಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ.
2026ನೇ ಸಾಲಿನಲ್ಲಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು.
ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕ ಹಾಗೂ ಪ್ರೌಢಶಾಲೆಯ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದವರಿಗೆ ತಲಾ ₹25,000 ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಅರ್ಹ ಶಿಕ್ಷಕರ ಸಾಧನೆ, ಸೇವಾ ಕೊಡುಗೆಗಳು ಹಾಗೂ ಪೂರಕ ದಾಖಲೆಗಳೊಂದಿಗೆ ನಾಮನಿರ್ದೇಶನವನ್ನು panchafoundation@gmail.com ಇ-ಮೇಲ್ಗೆ ನವೆಂಬರ್ 20ರೊಳಗೆ ಸಲ್ಲಿಸಬೇಕು.
ಪರಿಣತ ಮೂವರು ಸದಸ್ಯರ ಆಯ್ಕೆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ. ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ಟ್ರಸ್ಟಿ ಮುರಳಿ ಎಸ್. ಕಾಕೋಳು (ಮೊ. 9845075250) ಅವರನ್ನು ಸಂಪರ್ಕಿಸಬಹುದು ಎಂದು ಪ್ರತಿಷ್ಠಾನ ತಿಳಿಸಿದೆ.
