ಆ.16ರಂದು ಕಾಸರಗೋಡಿನಲ್ಲಿ ಪತ್ರಕರ್ತರ ಕುಟುಂಬ ಮಿಲನ ‘ಸ್ನೇಹತರಂಗ-2026’

0
9

ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ/KUWI) ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ‘ಸ್ನೇಹತರಂಗ–2026’ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮವು ಆಗಸ್ಟ್ 16, ಭಾನುವಾರ ಬೆಳಿಗ್ಗೆ 9.30 ಗಂಟೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಅಶೋಕ ಯಂಕಪ್ಪ ಚಂದರಗಿ (ಬೆಳಗಾವಿ) ಉದ್ಘಾಟಿಸಲಿದ್ದು, ಸ್ನೇಹ ಸಂದೇಶವನ್ನು ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸ್ನೇಹ ಗೌರವ’ ಪ್ರದಾನ ಮಾಡಲಾಗುತ್ತದೆ.

ಗೌರವ ಸ್ವೀಕರಿಸಲಿರುವವರಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ರೇಷ್ಠ ಪೋಷಕ ನಟಿ ಕು. ರೂಪಶ್ರೀ ವರ್ಕಾಡಿ, ಗ್ಲೋಬಲ್ ಐಕಾನ್ ಹೆಲ್ತ್ ಕೇರ್ ಪ್ರಶಸ್ತಿ ವಿಜೇತ ಡಾ. ಮಲ್ಲಿಕಾರ್ಜುನ ಎಸ್. ನಾಸಿ, ರಾಷ್ಟ್ರೀಯ ಗೌರವ ಐಕಾನ್ ಪ್ರಶಸ್ತಿ–2025 ಪುರಸ್ಕೃತ ಶಾಫಿ ಬಂಡಸಾಲೆ ಹಾಗೂ ‘ಸಾಧಕಶ್ರೇಷ್ಠ’ ಪ್ರಶಸ್ತಿ ವಿಜೇತ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಪ್ರಮುಖರಾಗಿದ್ದಾರೆ.

ಕಾರ್ಯಕ್ರಮದಲ್ಲಿ ‘ಸ್ನೇಹತರಂಗದ ಸ್ಪಂದನಗಳು’ ಎಂಬ ವಿಶೇಷ ಸಂವಾದವೂ ನಡೆಯಲಿದ್ದು, ಶಿಕ್ಷಣ, ಸಾಹಿತ್ಯ, ನ್ಯಾಯಾಂಗ, ವೈದ್ಯಕೀಯ, ಮಾಧ್ಯಮ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಹಲವು ಗಣ್ಯರು ತಮ್ಮ ಅನುಭವ ಹಾಗೂ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಪತ್ರಕರ್ತರ ಕುಟುಂಬಗಳ ನಡುವೆ ಬಾಂಧವ್ಯ ಬೆಳೆಸುವುದು, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಒಗ್ಗಟ್ಟಿನ ವೇದಿಕೆ ನಿರ್ಮಿಸುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗಾಗಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ, ಕೋಶಾಧಿಕಾರಿ ಶ್ರೀಕಾಂತ್ ನೆಟ್ಟಣಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಕೋಣಾಧಿಕಾರಿ ಅಜಿತ್ ಸ್ವರ್ಗ ಸೇರಿದಂತೆ ಪದಾಧಿಕಾರಿಗಳು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಜಿಲ್ಲೆಯ ಪತ್ರಕರ್ತರು ಹಾಗೂ ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.

“ಐಕ್ಯವೊಂದೇ ಮಂತ್ರ, ಐಕ್ಯದಿಂದ ಸ್ವತಂತ್ರ, ಐಕ್ಯಗಾನದಿ ರಾಷ್ಟ್ರ ತೇಲುತಿರಲಿ” ಎಂಬ ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಅವರ ಸಂದೇಶದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಪತ್ರಕರ್ತರ ಒಗ್ಗಟ್ಟು ಮತ್ತು ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಮೂಡಿಸಿದೆ.