ಕಾರ್ಕಳ : ಗಂಡ-ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಹಲ್ಲೆ ನಡೆಸಿದ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ.
ಧರ್ಮ ಎಂಬಾತ ಆರೋಪಿ ಎಂದು ಗುರುತಿಸಲಾಗಿದ್ದು, ಆತ ದಿನನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಬೇಬಿ ಅವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಜೂನ್ 15ರಂದು ಕೂಡ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಆತ, ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭಿಸಿ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬೇಬಿ ಅವರನ್ನು ತಕ್ಷಣ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಸಂಬಂಧ ದಂಪತಿಯ ಪುತ್ರಿ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

