ನಿಟ್ಟೆ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿ ನೇಪಾಳದ ಪ್ರಧಾನಿ..?!

0
227

ಎಂಟೆಕ್ ಪದವಿ ಪಡೆದ ಬಾಲೆನ್ ಶಾ ಹೆಸರು ಪರಿಗಣನೆ

ನೇಪಾಳ/ಕರ್ನಾಟಕ : ಸಾಮಾಜಿಕ ಮಾಧ್ಯಮ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳದಲ್ಲಿ ಸೋಮವಾರ ಆರಂಭವಾಗಿದ್ದ ಜನರಲ್ ಝಡ್ ಪ್ರತಿಭಟನೆಗಳು ತೀವ್ರಗೊಂಡು ಹಿಂಸಾತ್ಮಕವಾಗಿ ಬದಲಾಗಿದೆ. ರಾಜಧಾನಿ ಕಾಠ್ಮಂಡು ಸೇರಿದಂತೆ ದೇಶದಾದ್ಯಂತ ವ್ಯಾಪಕ ವಿಧ್ವಂಸಕ್ಕೆ ಕಾರಣವಾಗಿದೆ. 19 ಯುವ ಪ್ರತಿಭಟನಾಕಾರರ ಹತ್ಯೆಯಿಂದ ಕೋಪಗೊಂಡ ನೂರಾರು ಯುವಕರು ಸರ್ಕಾರಿ ಮತ್ತು ಖಾಸಗಿ ಆಸ್ತಿಗಳ ಮೇಲೆ ದಾಳಿ ನಡೆಸಿ ದೇಶವನ್ನು ಅರಾಜಕತೆಯ ಕಡೆಗೆ ತಳ್ಳಿದ್ದಾರೆ. ಈ ಹಿಂಸಾಚಾರದಿಂದಾಗಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದು, ನೇಪಾಳ ಸೇನೆಯು ದೇಶದ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಈ ಮಧ್ಯೆ ಅಚ್ಚರಿ ವಿಚಾರವೊಂದು ಮುನ್ನಲೆಗೆ ಬಂದಿದೆ. ಭಾರತದ ಬೆಂಗಳೂರಿನಲ್ಲಿರುವ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅನ್ನು ಪಡೆದಿರುವ ಬಾಲೆನ್ ಶಾ ಅವರನ್ನು ಪ್ರಧಾನಿ ಹುದ್ದೆಗೆ ಪರಿಗಣಿಸಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಅವರು ಇಲ್ಲಿ 2016 ರಿಂದ 2018 ರವರೆಗೆ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಅನ್ನು ಪೂರ್ಣಗೊಳಿಸಿದ್ದಾರೆ. ಬಾಲೆನ್ ಶಾ 2022 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಠ್ಮಂಡುವಿನ ಮೇಯರ್ ಸ್ಥಾನವನ್ನು ಗೆದ್ದು ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳನ್ನು ಅಚ್ಚರಿಗೊಳಿಸಿದ್ದರು. ಕರ್ನಾಟಕದಲ್ಲಿ ಶಿಕ್ಷಣ ಪಡೆದಿರುವ ಬಾಲೆನ್ ಶಾ ನೇಪಾಳದ ಪ್ರಧಾನಿಯಾಗಿ ನೇಮಕವಾದರೆ ಎರಡು ದೇಶಗಳ ಸಂಬಂಧದ ಮಧ್ಯೆ ಗಾಢ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಅರಾಜಕತೆ ಸೃಷ್ಟಿಯಾಗಿರುವ ದೇಶವನ್ನು ಶಾಂತಸ್ಥಿತಿಗೆ ತಂದು ಮುನ್ನಡೆಸುವುದು ಬಾಲೆನ್‌ ಶಾ ಅವರಿಗೆ ಸವಾಲಿನ ಕೆಲಸವಾಗಲಿದ್ದು, ಮುಂದಿನ ನಿರ್ಧಾರದ ಮೇಲೆ ನಿಂತಿದೆ.

ಅವರು ನಮ್ಮ ಸಂಸ್ಥೆಯ ಮೊದಲ ಸ್ವಾಯತ್ತ ಬ್ಯಾಚ್‌ನಲ್ಲಿದ್ದರು. ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದರು ಮತ್ತು ಉತ್ತಮ ಅಂಕಗಳನ್ನು ಗಳಿಸಿದರು. ತುಂಬಾ ವಿನಮ್ರರಾಗಿರುವ ಬಾಲೆನ್ ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ಉತ್ತರ ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಐಟಿ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಸ್ಥೆಯ ಉಪ ನೋಂದಣಿ ಅಧಿಕಾರಿ ಶ್ರೇಯಸ್ ಎವಿ ತಿಳಿಸಿದ್ದಾರೆ.

ಭಾರತ-ನೇಪಾಳ ಗಡಿಯಲ್ಲಿ ಬಿಗಿ ಭದ್ರತೆ

ಭಾರತ-ನೇಪಾಳ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಈ ಅಶಾಂತಿಯ ಸ್ಪಿಲ್‌ಓವರ್ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ಪ್ರವಾಸಿಗರು ನೇಪಾಳದಿಂದ ಹಿಂದಿರುಗುತ್ತಿದ್ದಾರೆ, ಮತ್ತು ಗಡಿಯಲ್ಲಿ ಸಿಲುಕಿರುವ ಭಾರತೀಯ ಮತ್ತು ನೇಪಾಳಿ ನಾಗರಿಕರನ್ನು ಗುರುತಿನ ದಾಖಲೆಗಳ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾಗುತ್ತಿದೆ. ನೇಪಾಳದ ಅಶಾಂತಿಯು ಭಾರತ-ನೇಪಾಳ ಗಡಿಯ ಉತ್ತರ ಪ್ರದೇಶದ ಜಿಲ್ಲೆಗಳಾದ ಮಹಾರಾಜಗಂಜ್, ಬಹ್ರೈಚ್, ಮತ್ತು ಲಖಿಂಪುರ ಖೇರಿಯಲ್ಲಿ ಭದ್ರತಾ ಕಳವಳವನ್ನು ಉಂಟುಮಾಡಿದೆ. ಕಪಿಲ್ವಾಸ್ತು ಜಿಲ್ಲೆಯ ಜೈಲಿನಿಂದ 459 ಕೈದಿಗಳ ಜೈಲ್ಬ್ರೇಕ್ ಘಟನೆಯಿಂದ ಗಡಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಸೋನೌಲಿ ಮತ್ತು ರೂಪೈದಿಹಾ ಚೆಕ್‌ಪೋಸ್ಟ್‌ಗಳಲ್ಲಿ ಚಲನವಲನಗಳನ್ನು ನಿರ್ಬಂಧಿಸಲಾಗಿದೆ, ಮತ್ತು SSB ಮತ್ತು ಉತ್ತರ ಪ್ರದೇಶ ಪೊಲೀಸರು ಕೂಲಂಕುಷ ತಪಾಸಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here