ಕೇರಳ ಫಲಿತಾಂಶ ಕರಾವಳಿಯಲ್ಲಿ ರಾಜಕೀಯ ಕಂಪನ

0
3

ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದೇಶಾದ್ಯಂತ ಚರ್ಚೆ ವಿಷಯವಾಗಿದೆ. ಆದರೆ ಕೇರಳ ಫಲಿತಾಂಶ ಹಿಂದುಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಕೇರಳ ರಾಜಕೀಯದಲ್ಲಿ ಅಲ್ಪಸಂಖ್ಯಾತ ಕೇಂದ್ರೀಕೃತ ಪಕ್ಷಗಳ ಹಿಡಿತ ಬಲಗೊಂಡಿರುವುದು ಹಾಗೂ ತುಳುನಾಡು ಕಾಸರಗೋಡಿನಲ್ಲಿ ಮೂಲ ಸಾಂಸ್ಕತಿಕ ಚೌಕಟ್ಟು ಬದಲಾಗುತ್ತಾ ರ್ನಿದಿಷ್ಟ ಸಮುದಾಯದ ರಾಜಕೀಯ ಮೇಲುಗೈಗೆ ದಾರಿ ಮಾಡಿಕೊಟ್ಟಿರುವುದು ಗಮನಾರ್ಹ ಸಂಗತಿ.

2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 140 ಸ್ಥಾನಗಳಲ್ಲಿ ಆಯ್ಕೆಯಾದ ಶಾಸಕರ ಧಾರ್ಮಿಕ ಹಿನ್ನೆಲೆ ಗಮನಿಸಿದರೆ ಹಿಂದೂ 77, ಮುಸ್ಲಿಂ 32, ಕ್ರೈಸ್ತ ಸಮುದಾಯದ 31 ಶಾಸಕರಿದ್ದರು. ಈ ಬಾರಿ ಹಿಂದೂ ಶಾಸಕರ ಸಂಖ್ಯೆ ಕುಸಿತವಾಗಿದ್ದು, ಮುಸ್ಲಿಂ ಮತ್ತು ಕ್ರೈಸ್ತ ಶಾಸಕರ ಸಂಖ್ಯೆ ಬಹುಮತಕ್ಕೆ ಹತ್ತಿರದಲ್ಲಿದೆ. ಯುಡಿಎಫ್ ​ನಿಂದ 102 ಶಾಸಕರು ಆಯ್ಕೆಯಾಗಿದ್ದು, ಇದರಲ್ಲಿ ಹಿಂದುಗಳು 39, ಮುಸ್ಲಿಂ 30, ಕ್ರೈಸ್ತ 33 ಮಂದಿ ಇದ್ದಾರೆ. ಎಲ್​ಡಿಎಫ್​ನಲ್ಲಿ 35 ಶಾಸಕರು ಆಯ್ಕೆಯಾಗಿದ್ದು, ಹಿಂದುಗಳು 27, ಕ್ರೈಸ್ತ 3, ಮುಸ್ಲಿಮರು 5 ಮಂದಿ ಇದ್ದಾರೆ. ಎನ್​ಡಿಎಯಲ್ಲಿ ಮೂವರು ಹಿಂದು ಶಾಸಕರಿದ್ದಾರೆ. ಒಟ್ಟು 140 ಶಾಸಕರಲ್ಲಿ ಹಿಂದುಗಳು 69, ಕೆಸ್ತರು 36, ಮುಸ್ಲಿಮರು 35 ಮಂದಿ ಇದ್ದಾರೆ.

ಮುಸ್ಲಿಂ ಮತಗಳ ಕ್ರೋಢಿಕರಣ

ಈ ಬಾರಿ ಚುನಾವಣೆಯಲ್ಲಿ ವಿಶೇಷವೆಂದರೆ ಬಿಜೆಪಿ ಮತ್ತು ಇಂಡಿಯನ್​ ಮುಸ್ಲಿಂ ಲೀಗ್​ ಮತಗಳಿಕೆ ಪ್ರಮಾಣ ಹೆಚ್ಚು ಕಡಿಮೆ ಸಮಾನವಾಗಿದೆ. ಆದರೆ ಬಿಜೆಪಿ 3 ಸ್ಥಾನ ಮತ್ತು ಐಯುಎಂಎಲ್​ 22 ಶಾಸಕರನ್ನು ಪಡೆದಿದೆ. ಬಿಜೆಪಿಗೆ 24,66,178 ಮಂದಿ (ಶೇ. 11.42) ಹಾಗೂ ಐಯುಎಂಎಲ್​ಗೆ 23,78,053 ಮಂದಿ ಮತ ಚಲಾಯಿಸಿದ್ದಾರೆ. ಆದರೆ ಲಿತಾಂಶದಲ್ಲಿ ಬಹಳಷ್ಟು ಅಂತರವಿದೆ. ಇದು ಮುಸ್ಲಿಂ ಮತಗಳ ಕ್ರೋಢಿಕರಣವನ್ನು ಸೂಚಿಸುತ್ತದೆ.

ಕಾಸರಗೋಡು ಜಿಲ್ಲೆಯ ರಾಜಕೀಯ ಚಿತ್ರಣ

ಕಾಸರಗೋಡು ಜಿಲ್ಲೆ ತುಳುನಾಡಿನ ಭಾಗವಾಗಿದ್ದು, ಇಲ್ಲಿನ ರಾಜಕೀಯ ಸ್ಥಿತಿಗತಿಗಳು ಕರ್ನಾಟಕದ ಕರಾವಳಿಯ ಮೇಲೆಯೂ ಪ್ರಭಾವ ಬೀರುತ್ತವೆ. ಮಂಜೇಶ್ವರ, ಕಾಸರಗೋಡು, ಉದುಮ, ಕಾಂಞಂಗಾಡ್​, ತೃಕ್ಕರಿಪುರ ಸಹಿತ 5 ವಿಧಾನಸಭಾ ಕ್ಷೇತ್ರಗಳಿದ್ದು, ಮಂಜೇಶ್ವರ ಮತ್ತು ಈಕಾಸರಗೋಡಿನಲ್ಲಿ ಮುಸ್ಲಿಂ ಲೀಗ್​ ಅಭ್ಯರ್ಥಿ ಜಯಗಳಿಸಿದ್ದಾರೆ. ಈ ಬಾರಿ ಕಾಸರಗೋಡು ಜಿಲ್ಲೆಯಲ್ಲಿ ಮುಸ್ಲಿಂ ಲೀಗ್​ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಾಗಿರುವುದು ಅಲ್ಪಸಂಖ್ಯಾತ ಮತಗಳ ಬಲವಾದ ಧ್ರುವಿಕರಣವನ್ನು ಸೂಚಿಸುತ್ತದೆ. ಕಾಸರಗೋಡಿನಲ್ಲಿ ಮುಸ್ಲಿಂ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 37.24%ರಷ್ಟಿದೆ. ಹಿಂದೂ ಜನಸಂಖ್ಯೆ 55.84%, ಕ್ರೆಸ್ತ ಜನಸಂಖ್ಯೆ 6.69%ರಷ್ಟಿದೆ. ವಿಶೇಷವೆಂದರೆ, ಕಾಸರಗೋಡು ತಾಲೂಕಿನಲ್ಲಿ ಮುಸ್ಲಿಂ ಜನಸಂಖ್ಯೆ ಸುಮಾರು ಶೇ. 48ರಷ್ಟಿದ್ದು ರಾಜಕೀಯವಾಗಿ ಅತ್ಯಂತ ನಿರ್ಣಾಯಕ ಶಕ್ತಿಯಾಗಿದೆ.

ತುಳುನಾಡಿಗೆ ‘ಎಚ್ಚರಿಕೆ ಗಂಟೆ’ ಹೇಗೆ?

ಕೇರಳದ ಅಲ್ಪಸಂಖ್ಯಾತ ರಾಜಕಾರಣವು ತುಳುನಾಡಿಗೆ ಭಾಷಾವಾರು ಅಲ್ಪಸಂಖ್ಯಾತರ ಹಿತಾಸಕ್ತಿಗೆ ಎಚ್ಚರಿಕೆ ಗಂಟೆಯಾಗಿದೆ. ಕಾಸರಗೋಡಿನಲ್ಲಿ ತುಳು ಮತ್ತು ಕನ್ನಡ ಮಾತನಾಡುವವರು ಹೆಚ್ಚಿದ್ದಾರೆ. ಆದರೆ ರಾಜಕೀಯವಾಗಿ ಮುಸ್ಲಿಂ ಲೀಗ್​ ಅಥವಾ ಎಡರಂಗದ ಪ್ರಾಬಲ್ಯ ಹೆಚ್ಚಾದಂತೆ, ಕನ್ನಡ ಭಾಷೆ ಮತ್ತು ತುಳು ಸಂಸತಿ ಹಿತಾಸಕ್ತಿಗಳು ಮೂಲೆಗುಂಪಾಗುತ್ತಿವೆ ಎಂಬ ಆತಂಕವಿದೆ. ಜೊತೆಗೆ ಕಾಸರಗೋಡಿನ ಜನಸಂಖ್ಯಾ ಬದಲಾವಣೆ ಮತ್ತು ಅಲ್ಲಿನ ರಾಜಕೀಯ ಪ್ರಾತಿನಿಧ್ಯವು ಕರ್ನಾಟಕದ ಗಡಿ ಭಾಗಗಳ ಮೇಲೆಯೂ ಪ್ರಭಾವ ಬೀರಬಹುದು ಎಂಬುದು ಕೆಲವು ಸಂಘಟನೆಗಳ ವಾದ.

ಹಿಂದೂ ಸಮುದಾಯದಲ್ಲಿ ಆತಂಕಕ್ಕೆ ಕಾರಣಗಳೇನು?

ಅಲ್ಪಸಂಖ್ಯಾತ ಕೇಂದ್ರಿತ ಪಕ್ಷಗಳ ಪ್ರಬಲ ಚೌಕಾಶಿ ಶಕ್ತಿ ಹೆಚ್ಚಾಗಿದೆ. ಯುಡಿಎ್​ ಮೈತ್ರಿಕೂಟದಲ್ಲಿ ಮತ್ತು ಕೇರಳ ಕಾಂಗ್ರೆಸ್​ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿವೆ. ಕೇರಳ ಕಾಂಗ್ರೆಸ್​ ಈಗಾಗಲೇ ಎರಡು ಸಚಿವ ಸ್ಥಾನಗಳಿಗೆ ಪಟ್ಟು ಹಿಡಿದಿದೆ. ಮುಸ್ಲಿಂ ಲೀಗ್​ ಕೂಡ ಪ್ರಮುಖ ಖಾತೆಗಳನ್ನು ನಿರೀಕ್ಷಿಸುತ್ತಿದೆ. ಸರ್ಕಾರದ ನೀತಿ ನಿರೂಪಣೆಯಲ್ಲಿ ಅಲ್ಪಸಂಖ್ಯಾತ ಧಾರ್ಮಿಕ ಸಂಘಟನೆಗಳ ಪ್ರಭಾವ ಹೆಚ್ಚಾಗಬಹುದು, ಇದು ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿಗೆ ಧಕ್ಕೆ ತರಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಕೇರಳದ ಮಲಬಾರ್​ ಭಾಗದಲ್ಲಿ ಮುಸ್ಲಿಂ ಸಮುದಾಯದ ಮತಗಳು ಮುಸ್ಲಿಂ ಲೀಗ್​ ಪರವಾಗಿ ಸಂಪೂರ್ಣ ಧ್ರುವಿಕರಣಗೊಂಡಿವೆ. ಹಿಂದೂಗಳ ಮತಗಳು ವಿವಿಧ ಪಕ್ಷಗಳ ನಡುವೆ ಹಂಚಿಹೋಗುತ್ತಿವೆ. ಆದರೆ ಅಲ್ಪಸಂಖ್ಯಾತ ಮತಗಳು ‘ಬ್ಲಾಕ್​ ವೋಟ್​’ ಆಗಿ ಚಲಾವಣೆಯಾಗುತ್ತಿರುವುದರಿಂದ, ವಿಧಾನಸಭೆಯಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ಕಾಯುವ ನಾಯಕರ ಪ್ರಾತಿನಿಧ್ಯ ಕ್ಷೀಣಿಸುತ್ತಿದೆ. ಅಲ್ಪಸಂಖ್ಯಾತ ಪಕ್ಷಗಳ ಅತಿಯಾದ ಪ್ರಾಬಲ್ಯವು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ, ದೇವಸ್ಥಾನಗಳ ಆಡಳಿತ ಮತ್ತು ಭೂ ಹಕ್ಕುಗಳ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಅಭಿಪ್ರಾಯ. ಗಡಿಯಾಚೆಗಿನ ಚುನಾವಣೆ ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿಯೂ ರಾಜಕೀಯ ಕಂಪನ ಸೃಷ್ಟಿಸಿದೆ.

ವರದಿ : ಪ್ರಮೇಯ

LEAVE A REPLY

Please enter your comment!
Please enter your name here