ಕಿನ್ನಿಗೋಳಿ : ಶೂ ಫ್ಯಾಶನ್ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ : ಆರೋಪಿಗೆ 3 ವರ್ಷ ಜೈಲು ಶಿಕ್ಷೆ

0
234

ಕಿನ್ನಿಗೋಳಿ ಪಟ್ಟಣದ ಶೂ ಫ್ಯಾಶನ್ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ಹಾಗೂ ₹10,500 ದಂಡ ವಿಧಿಸಿದೆ. ಮಹಿಳೆಯೊಬ್ಬರು ಚಪ್ಪಲಿ ಖರೀದಿಸಲು ಕಿನ್ನಿಗೋಳಿಯ ಶೂ ಫ್ಯಾಶನ್ ಅಂಗಡಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 12.20 ಗಂಟೆ ವೇಳೆಗೆ ಅಂಗಡಿ ಮಾಲಕ ಸಂಶುದ್ದೀನ್ ಎಂಬಾತನು ಚಪ್ಪಲಿ ತೋರಿಸುವ ನೆಪದಲ್ಲಿ ಅಂಗಡಿಯ ಒಳಗಿನ ಕಂಪಾರ್ಟ್‌ಮೆಂಟ್‌ಗೆ ಮಹಿಳೆಯನ್ನು ಕರೆದು, ಆಕೆಯ ಭುಜವನ್ನು ಮುಟ್ಟಿ, ಎದೆಗೆ ಕೈಹಾಕಿ ಮಾನಭಂಗ ಮಾಡಿದ್ದಲ್ಲದೆ, ಬಟ್ಟೆ ತೆಗೆಯಲು ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಸಂಬಂಧ ನೊಂದ ಮಹಿಳೆಯ ದೂರಿನ ಮೇರೆಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 136/2021 ಅಡಿಯಲ್ಲಿ ಐಪಿಸಿ ಕಲಂ 342, 354(ಎ), 354(ಬಿ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕೆ. ಕುಸುಮಾಧರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ವಿನಾಯಕ ತೊರಗಲ್ ಅವರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ತನಿಖೆಗೆ ಎಎಸ್ಐ ಸಂಜೀವ ಎ.ಪಿ ಸಹಕರಿಸಿದ್ದರು.

ಸದರ ಪ್ರಕರಣವು ಮಾಡುಬಿದರೆಯ ಮಾನ್ಯ ಹಿರಿಯ ಸಿಜೆ ಮತ್ತು ಜೆಎಂಎಪ್ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ನ್ಯಾಯಾಧೀಶರಾದ ಶ್ರೀ ಮಧುಕರ ಪಿ. ಬಾಗವತ್ ಅವರು ದಿನಾಂಕ 06-01-2026 ರಂದು ತೀರ್ಪು ಪ್ರಕಟಿಸಿ, ಆರೋಪಿಯಾದ ಸಂಶುದ್ದೀನ್ (ತಂದೆ: ಲೇಟ್ ಮೊಹಮ್ಮದ್, ವಾಸ: ಜೋಡುಬೈಲು, ಗೋಳಿಜಾರ ರಸ್ತೆ, ತಾಳಿಪಾಡಿ ಗ್ರಾಮ, ಕಿನ್ನಿಗೋಳಿ) ದೋಷಿ ಎಂದು ಘೋಷಿಸಿದರು. ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ₹10,500 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ನೇತ್ರಾವತಿ ಕೋಟ್ಯಾನ್ ಅವರು ಪರಿಣಾಮಕಾರಿಯಾಗಿ ವಾದ ಮಂಡಿಸಿ ಆರೋಪಿಗೆ ಶಿಕ್ಷೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

LEAVE A REPLY

Please enter your comment!
Please enter your name here