ಮಂಗಳೂರಿನಲ್ಲಿ “ರಾಜಕೇಸರಿ ರಿಪಬ್ಲಿಕ್ ಕಪ್–ಸೀಸನ್ 1” ; ಕುಡ್ಲ ಸಾರಥಿ ಟೈಗರ್ಸ್ ಚಾಂಪಿಯನ್

0
73

ಮಂಗಳೂರು : ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ ಸಂಭ್ರಮದ ಅಂಗವಾಗಿ ಜನವರಿ 4ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ “ಏಕತೆಗಾಗಿ ಕ್ರಿಕೆಟ್” ಧ್ಯೇಯವಾಕ್ಯದಡಿ ಆಯೋಜಿಸಲಾದ ರಾಜಕೇಸರಿ ರಿಪಬ್ಲಿಕ್ ಕಪ್ – ಸೀಸನ್ 1 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನೆರವೇರಿತು.

ಎಂಟು ಶ್ರಮಿಕರ ತಂಡಗಳ ನಡುವೆ ನಡೆದ ಈ ಪಂದ್ಯಾಟದಲ್ಲಿ ರಿಕ್ಷಾ ಚಾಲಕರ ತಂಡವಾದ ಕುಡ್ಲ ಸಾರಥಿ ಟೈಗರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿ ರೂ.25,000 ನಗದು ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟ್ಯಾಕ್ಸಿ ಚಾಲಕರ ತಂಡವಾದ ಡಿ.ಕೆ ಟ್ಯಾಕ್ಸಿ ವಾರಿಯರ್ಸ್ ರನ್ನರ್ ಅಪ್ ಆಗಿ ರೂ.12,500 ನಗದು ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡಿತು. ಎಂ.ಸಿ.ಸಿ. ಮಂಗಳೂರು ತಂಡ ಶಿಸ್ತುಬದ್ಧ ತಂಡ ಪ್ರಶಸ್ತಿಗೆ ಭಾಜನವಾಯಿತು.

ಫೈನಲ್ ಪಂದ್ಯದಲ್ಲಿ ಕುಡ್ಲ ಸಾರಥಿ ಟೈಗರ್ಸ್ ತಂಡದ ತೌಫಿಕ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಸರಣಿಯುದ್ದಕ್ಕೂ ಉತ್ತಮ ದಾಂಡಿಗನಾಗಿ ಡಿ.ಕೆ ಟ್ಯಾಕ್ಸಿ ವಾರಿಯರ್ಸ್ ತಂಡದ ರಾಕೇಶ್, ಉತ್ತಮ ಎಸೆತಗಾರನಾಗಿ ವಿಕಿಲ್ ಪ್ರಶಸ್ತಿ ಪಡೆದರು. ತೌಫಿಕ್ ಅವರು ಸರಣಿ ಶ್ರೇಷ್ಠ (ಮ್ಯಾನ್ ಆಫ್ ದಿ ಸಿರೀಸ್) ಪ್ರಶಸ್ತಿಗೂ ಭಾಜನರಾದರು. ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ಟ್ರೋಫಿಯೊಂದಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಬಹುಮಾನವಾಗಿ ನೀಡಲಾಯಿತು.

ಪಂದ್ಯಾಕೂಟವನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿ, ಶ್ರಮಿಕ ವರ್ಗವನ್ನು ಒಗ್ಗೂಡಿಸುವ ವಿನೂತನ ಪರಿಕಲ್ಪನೆಯ ಈ ಕ್ರಿಕೆಟ್ ಪಂದ್ಯಾಟವನ್ನು ಶ್ಲಾಘಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಕುಮಾರಿ ಧನಲಕ್ಷ್ಮಿ ಪೂಜಾರಿ, ಅವರ ತರಬೇತುದಾರರು ಹಂಸವತಿ, ಹಾಗೂ “ಮಿಸಸ್ ಅರ್ಥ್ ಇಂಟರ್ ನ್ಯಾಷನಲ್” ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾ ಸಂಪತ್ ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಮಾನವೀಯತೆ ಮೆರೆದ ಖಾಸಗಿ ಬಸ್ ಚಾಲಕ ಮೊಹಮ್ಮದ್ ಮೊಯಿದಿನ್ ಅವರಿಗೆ ಗೌರವ ಸನ್ಮಾನ ನಡೆಯಿತು.

ವೇದಿಕೆಯಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಲಯನ್ ಜಯರಾಜ್ ಪ್ರಕಾಶ್, ಸಿಟಿ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್, ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ಕ್ರೀಡಾ ಸಮಿತಿಯ ಗೌರವ ಸಲಹೆಗಾರ ಆನಂದ್ ಕೆ, ಯುವ ವಾಹಿನಿ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಉಪಸ್ಥಿತರಿದ್ದರು. ಅತಿಥಿಗಳು ಸಾಂಕೇತಿಕವಾಗಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸೇರಿದಂತೆ ಹಲವು ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಪಂದ್ಯಾಕೂಟದಲ್ಲಿ ಪೆಟ್ರೋಲ್ ಬಂಕ್ ಶ್ರಮಿಕರು, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಛಾಯಾಚಿತ್ರಗ್ರಾಹಕರು, ಖಾಸಗಿ ಬಸ್ ಸಿಬ್ಬಂದಿ ಹಾಗೂ ಹಿರಿಯ ಆಟಗಾರರ ತಂಡಗಳು ಪಾಲ್ಗೊಂಡಿದ್ದವು. ಜೊತೆಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅಂಚೆ ಇಲಾಖೆಯ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here