ಕ್ರೀಡಾ ಭಾರತಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0
6

ಕ್ರೀಡಾ ಭಾರತಿ ಹೆಬ್ರಿ ತಾಲೂಕು ಮತ್ತು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಸೀತಾರಾಮ ಶೆಟ್ಟಿ ಬಾರ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ , ಧ್ಯಾನ್ ಚಂದ್ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನವನ್ನು ನಾವಿಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದ್ದೇವೆ .ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಧ್ಯಾನಚಂದ್ ಅವರ ಕೊಡುಗೆ ಅಪಾರವಾದುದು. ಕ್ರೀಡಾ ಕ್ಷೇತ್ರದಲ್ಲಿ ಇಂದಿನ ಯುವ ಪೀಳಿಗೆ ಧ್ಯಾನಚಂದ್ ಅವರನ್ನು ಸ್ಪೂರ್ತಿ ಮತ್ತು ಆದರ್ಶವನ್ನಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಅಮೃತ ಭಾರತಿ ವಿದ್ಯಾಲಯದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ನಿತೀಶ್ ಅವರ ತಾಯಿ ಜ್ಯೋತಿಯವರಿಗೆ ಜೀಜಾ ಮಾತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ ರಾಷ್ಟ್ರ ರಾಜ್ಯಮಟ್ಟದ ಕ್ರೀಡಾಪಟುಗಳನ್ನು ತರಬೇತುಗೊಳಿಸಿದ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಅಮೃತ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಸೀತಾನದಿ ವಿಠಲ ಶೆಟ್ಟಿಯವರು ಮಾತನಾಡಿ , ಕ್ರೀಡೆಯ ಉನ್ನತಿಗಾಗಿ ಕ್ರೀಡಾ ಭಾರತಿ ಸಾಕಷ್ಟು ಕೆಲಸವನ್ನು ಮಾಡುತ್ತಿದೆ. ಅದರ ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಒತ್ತು ಕೊಡುವಂತಹ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಜೊತೆಗೂಡಿ ಕ್ರೀಡಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ ಎಂದರು. ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ , 1992 ರಲ್ಲಿ ಪೂನಾ ದಲ್ಲಿ ಆರಂಭಗೊಂಡಂತಹ ಕ್ರೀಡಾ ಭಾರತಿ ಇಂದು ರಾಜ್ಯದ ಮೂಲೆ ಮೂಲೆಗಳನ್ನು ತಲುಪಿ, ಪ್ರತಿ ತಾಲೂಕು ಕೇಂದ್ರದಲ್ಲಿಯೂ ಕರ್ತವ್ಯವನ್ನು ನಿರ್ವಹಿಸುತ್ತಿದೆ. 2021 ರಲ್ಲಿ ಆರಂಭವಾದ ಹೆಬ್ರಿ ತಾಲೂಕು ಕ್ರೀಡಾ ಭಾರತಿ ಪ್ರತಿವರ್ಷ ಹತ್ತಾರು ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ ಎಂದರು.

ಸಭಾಧ್ಯಕ್ಷತೆ ವಹಿಸಿರುವ ಕ್ರೀಡಾ ಭಾರತಿ ಗೌರವಾಧ್ಯಕ್ಷರಾದ ಗುರುದಾಸ್ ಶೆಣೈ ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕ್ರೀಡೆಗೂ , ಕ್ರೀಡಾ ಭಾರತಿಗೂ, ಅಮೃತ ಭಾರತಿಗೂ ಅವಿನಾಭಾವ ಸಂಬಂಧ . ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣತೊಟ್ಟಿರುವ ಅಮೃತ ಭಾರತಿ ಎಲ್ಲ ಕ್ಷೇತ್ರ ಗಳಲ್ಲೂ ಮಕ್ಕಳ ಏಳಿಗೆಗಾಗಿ ಕಾರ್ಯ ಚಟುವಟಿಕೆ ಗಳನ್ನು ಮಾಡುತ್ತ ಬಂದಿದೆ. ಅಂತೆಯೇ ಕ್ರೀಡಾ ಭಾರತಿಯ ಎಲ್ಲಾ ಚಟುವಟಿಕೆಗಳಿಗೂ ಅಮೃತ ಭಾರತಿ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಎಂದರು. ಮುಖ್ಯ ಅತಿಥಿ ಶ್ರೀ ಎಚ್. ಸೀತಾರಾಮ ಶೆಟ್ಟಿ ಬಾರ್ಕೂರು ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷರಾದ ಟಿ . ಜಿ. ಪಾಂಡುರಂಗ ಪೈ , ಅಮೃತ ಭಾರತಿ ಟ್ರಸ್ಟ್ ನ ವಿಶ್ವಸ್ಥರಾದ ಯೋಗೀಶ್ ಭಟ್, ಸುಧೀರ್ ನಾಯಕ್ , ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ , ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಎಚ್ ವೈ, ಅಪರ್ಣ ಆಚಾರ್, ಶ್ರೀಮತಿ ಶಕುಂತಲಾ ಉಪಸ್ಥಿತರಿದ್ದರು.

ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ರವೀಂದ್ರ ಶೆಟ್ಟಿ ವಂದಿಸಿ , ಕನ್ನಡ ಪ್ರಾಧ್ಯಾಪಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.