ಹೆಬ್ರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ವ್ಯಕ್ತಿ ಸಾವು

0
46

ಹೆಬ್ರಿ : ಬ್ರಹ್ಮಾವರ ರಸ್ತೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಹುತ್ತುರ್ಕೆ ಸಮೀಪದ ಮೂರುರಸ್ತೆ ಬಳಿ ನಡೆದಿದೆ.

ಮೃತರನ್ನು ಕಳ್ಳೂರು ಗ್ರಾಮದ ದರ್ಖಾಸು ಮನೆ ನಿವಾಸಿ ಸದಾನಂದ ನಾಯಕ್ ಎಂದು ಗುರುತಿಸಲಾಗಿದೆ. ಬಸ್‌ಗೆ ಪಾರ್ಸೆಲ್ ಹಾಕಲು ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಮರದಡಿ ಸಿಲುಕಿಕೊಂಡಿದ್ದು, ಕಾರಿನೊಳಗಿದ್ದ ಸದಾನಂದ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು.

ಬಳಿಕ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವುಗೊಳಿಸಿ ಕಾರಿನೊಳಗೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದೇ ಪ್ರದೇಶದಲ್ಲಿ ಕೆಲವೇ ದಿನಗಳ ಹಿಂದೆ ರಸ್ತೆಗೆ ಮರವೊಂದು ಬಿದ್ದು ಯುವತಿಯೊಬ್ಬರು ಅಪಾಯದಿಂದ ಪಾರಾಗಿದ್ದರು. ಇದೀಗ ಮತ್ತೊಮ್ಮೆ ಅದೇ ಪರಿಸರದಲ್ಲಿ ಬೃಹತ್ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಸ್ತೆಯ ಬದಿಯಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಹಾಗೂ ಒಣಗಿರುವ ಮರಗಳನ್ನು ಗುರುತಿಸಿ ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಮುಖ ರಸ್ತೆಯಾಗಿರುವುದರಿಂದ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.