ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾಯಿಸಿ ಮರುನಾಮಕರಣ ಮಾಡುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದ್ದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಕೂಡಾ ಪ್ರತಿಕ್ರಿಯಿಸಿದ್ದು, ಕೆನರಾ, ಕನ್ನಡ ಎಂಬ ಹೆಸರು ಇಲ್ಲಿಗೆ ಹೊಂದುವುದಿಲ್ಲ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪೋರ್ಚುಗೀಸರು, ಬ್ರಿಟೀಷರು ಬರುವ ಮುನ್ನ ತುಳುನಾಡು, ತುಳುದೇಶ ಎಂಬ ಹೆಸರಿತ್ತು. ಮಂಗಳೂರು ಎಂಬ ಹೆಸರು ಆ ಮೊದಲೇ ಇತ್ತು. ಈ ವಿಷಯದಲ್ಲಿ ಸಹಜವಾಗಿ ಹೋರಾಟ ಆಗಬೇಕಿದೆ. ಇದಕ್ಕೆ ಆಡಳಿತಾತ್ಮಕವಾಗಿ ಬೆಂಬಲ ಸೂಚಿಸಿರುವ ಶಾಸಕರು, ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವ ಕೂಡಾ ತುಳುನಾಡ ಉತ್ಸವ ಮಾಡುವ ದೃಷ್ಠಿಯಲ್ಲೂ ಕೆಲಸವಾಗಬೇಕಿದೆ ಎಂದಿದ್ದಾರೆ.