ರಿಶಾಲ್‌ನಗರ: ಸಾರ್ವಜನಿಕ ಅಯ್ಯಪ್ಪ ಸ್ವಾಮಿ ಭಕ್ತವೃಂದ
ಕಟಪಾಡಿ, ಮೇ 15: ಇಲ್ಲಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಏಣಗುಡ್ಡೆ-ಕುರ್ಕಾಲು ರಸ್ತೆ ರಿಶಾಲ್ ನಗರದ ಪಂಪಾ ಕ್ಷೇತ್ರದ ನೂತನ ಅಮೃತ ಶಿಲಾಮಯ ಅಯ್ಯಪ್ಪ ದೇವಾಲಯದ ನಿರ್ಮಾಣದ ಅಂಗವಾಗಿ ಶಿಲಾನ್ಯಾಸ, ನಿಧಿ ಕುಂಭ ಸ್ಥಾಪನೆಯು ಮೇ 18 ರ ಬೆಳಗ್ಗೆ 9.47 ರಿಂದ ಜರಗಲಿದೆ.
ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮಂಗಳೂರು ಶಕ್ತಿ ನಗರದ ವೇದಬ್ರಹ್ಮಶ್ರೀ ಪ್ರಕಾಶ ವಿ. ಹೊಳ್ಳ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅನಂತರ ಮುಷ್ಠಿಕಾಣಿಕೆ ಸಮರ್ಪಣೆ ಮತ್ತು ವಿಜ್ಞಾಪನ ಪತ್ರ ಬಿಡುಗಡೆಗೊಳ್ಳಲಿದೆ. ಧಾರ್ಮಿಕ ಸಭೆಯಲ್ಲಿ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನಗೈಯಲಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಗುರುಸ್ವಾಮಿ ಸುರೇಶ್ ಜತ್ತನ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ ಸಹಿತ ಗಣ್ಯರು ಪಾಲ್ಗೊಳ್ಳುವರು.
ರಾಜ್ಯದಲ್ಲೇ ಪ್ರಥಮ
ಕುರ್ಕಾಲು-ಮಣಿಪುರದಲ್ಲಿ ಹರಿಯುತ್ತಿರುವ ಪಾಪನಾಶಿನಿ ನದಿಪಾತ್ರದಲ್ಲಿ ಉದ್ಯಮಿ ರಿಶಾನ್ ಟಿ. ದಾನವಾಗಿ ನೀಡಿರುವ 30 ಸೆಂಟ್ಸ್ ನಿವೇಶನದಲ್ಲಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮಕರಾನ್ನ ಅಮೃತ ಶಿಲೆಯನ್ನು ಬಳಸಿ ನಿರ್ಮಿಸುತ್ತಿರುವ ದೇವಾಲಯವು ದಕ್ಷಿಣ ಭಾರತದ ದ್ರಾವಿಡ ಶೈಲಿಯ ವಾಸ್ತು ಶಿಲ್ಪ ಒಳಗೊಂಡಿದೆ. ರಾಜಸ್ಥಾನ ಸೋಮಪುರದ ಶಿಲ್ಪಿ ವಸಂತ ಕುಮಾರ್ ಶಾಂತಿಲಾಲ್ ಮತ್ತು ತಂಡವು ಕೆತ್ತನೆ ಕೆಲಸಗಳನ್ನು ನಿರ್ವಹಿಸುವರು.
ಅಯೋಧ್ಯೆ ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣ ಶಿಲೆಯ ಅಯ್ಯಪ್ಪಸ್ವಾಮಿ ಮೂರ್ತಿ ಕೆತ್ತನೆಯನ್ನು ಮಾಡುವರು. ಮಂದಿರದಲ್ಲಿ ಗಣಪತಿ, ಸುಬ್ರಹ್ಮಣ್ಯ ಸಹಿತ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಗುರುಸ್ವಾಮಿ ಹಾಗೂ ಸರ್ವ ಸದಸ್ಯರ ಪ್ರಕಟನೆ ತಿಳಿಸಿದೆ.