ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ವಿವಿಧ ಸಂಘಗಳು ಹಾಗೂ ಆಡ್-ಆನ್ ಕೋರ್ಸ್‌ಗಳಿಗೆ ಚಾಲನೆ

0
8

ಮಂಗಳೂರು : ಮಂಗಳೂರು ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ವಿವಿಧ ವಿದ್ಯಾರ್ಥಿ ಸಂಘಗಳು ಹಾಗೂ ಆಡ್-ಆನ್ (Add-on) ಕೋರ್ಸ್‌ಗಳ ಉದ್ಘಾಟನಾ ಸಮಾರಂಭವು ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ನಗರ ಸಂಚಾರ ಉಪವಿಭಾಗದ ಎಸಿಪಿ ನಜ್ಮಾ ಫಾರೂಖಿ (KSPS) ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಎಸಿಪಿ ನಜ್ಮಾ ಫಾರೂಖಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಮಾತ್ರ ಸೀಮಿತರಾಗದೆ ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘಟನಾ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಯುವಜನರು ಸಮಾಜದತ್ತ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿ ರೆವ. ಫಾ. ಐವನ್ ಮೈಕೆಲ್ ರೊಡ್ರಿಗಸ್ ಮಾತನಾಡಿ, ವಿದ್ಯಾರ್ಥಿ ಸಂಘಟನೆಗಳು, ವಿವಿಧ ಸಂಘಗಳು ಹಾಗೂ ಆಡ್-ಆನ್ ಕೋರ್ಸ್‌ಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದರು. ನಿಯಮಿತ ಪಠ್ಯಕ್ರಮದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗಾವಕಾಶಗಳಿಗೆ ಉತ್ತಮ ರೀತಿಯಲ್ಲಿ ಸಜ್ಜಾಗಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ರೆವ. ಡಾ. ಅಲ್ವಿನ್ ಸೆರಾವೊ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್‌ನ ಉಪಾಧ್ಯಕ್ಷ ಡಿಕ್ಸನ್ ಡಿಸೋಜ, ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ರೆವ. ಫಾ. ಉದಯ ಫೆರ್ನಾಂಡಿಸ್, ಐಕ್ಯೂಎಸಿ ಸಂಯೋಜಕಿ ಚೇತನಾ ಕೆ., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಲೆಫ್ಟಿನೆಂಟ್ ಡೆನ್ಜಿಲ್ ಎಡ್ರೋಡ್ ಪಿಂಟೊ, ಆಡ್-ಆನ್ ಕೋರ್ಸ್ ಸಂಯೋಜಕಿ ಹರ್ಷಾ, ಸಂಘಗಳ ಸಂಯೋಜಕಿ ಮಂಜುಷಾ, ಆಡ್-ಆನ್ ಕೋರ್ಸ್‌ಗಳ ಸಂಪನ್ಮೂಲ ವ್ಯಕ್ತಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ವಿಯೋಲ್ ರೆನ್ವಿಲ್ ಮೊಂಟೇರೊ ಸ್ವಾಗತಿಸಿದರು. ಕಾರ್ಯದರ್ಶಿ ಫಾತಿಮಾ ಫರ್ಹಾನಾ ವಂದಿಸಿದರು. ಪ್ರಿನ್ಸೆಲ್ II ಎಫ್‌ಎನ್‌ಡಿ ಕಾರ್ಯಕ್ರಮ ನಿರೂಪಿಸಿದರು.