ಯಕ್ಷಗಾನದ ಯುವ ಪ್ರತಿಭೆಗಳ ಸಂಗಮಕ್ಕೆ ಸಾಕ್ಷಿಯಾದ ‘ಮಯೂರ ಯಾನ – 2’

0
53

ಮಂಗಳೂರು : ಯಕ್ಷಗಾನ ಕಲೆಯ ಮೇಲಿನ ಅಭಿಮಾನ, ಗುರುಪರಂಪರೆಯ ಗೌರವ ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಯೂರ ಪ್ರತಿಷ್ಠಾನ (ರಿ.), ಮಂಗಳೂರು ಇದರ ದ್ವಿತೀಯ ವಾರ್ಷಿಕೋತ್ಸವ ‘ಮಯೂರ ಯಾನ – 2’ ಕುಡುಪಿನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ವೇ. ಮೂ. ಕೃಷ್ಣರಾಜ ತಂತ್ರಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಕ್ಷಗಾನವು ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಕಲೆಯಾಗಿದ್ದು, ಪುರಾಣ ಜ್ಞಾನವನ್ನು ಜನರಿಗೆ ತಲುಪಿಸುವ ಮಹತ್ವದ ಮಾಧ್ಯಮವಾಗಿದೆ. ಆರಾಧನಾ ಕೇಂದ್ರಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರುವುದು ಸಂತಸದ ವಿಚಾರ. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಇಂತಹ ಪ್ರಯತ್ನಗಳು ಅಭಿನಂದನೀಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಪಿ. ಸದಾಶಿವ ಐತಾಳ್ ಮಾತನಾಡಿ, ಯಕ್ಷಗಾನ ಕಲೆಯ ಉಳಿವು ಮತ್ತು ಬೆಳವಣಿಗೆಯೊಂದಿಗೆ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುವ ಹಾಗೂ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಪೋಷಕರ ಸಹಕಾರದೊಂದಿಗೆ ಮಯೂರ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಭಾಗವತ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಪ್ರತಿಷ್ಠಾನದ ವತಿಯಿಂದ ‘ಮಯೂರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ರತ್ನ ದೇವ್ ಪುಂಜಾಲಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ರವೀಂದ್ರ ನಾಯಕ್ ಕೆ., ವಿ ಇನ್ಫಾ ಕನ್‌ಸ್ಟ್ರಕ್ಷನ್ಸ್ & ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮಾನಂದ ನೂಜಿಪ್ಪಾಡಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮೊಕ್ತೇಸರ ಭಾಸ್ಕರ್ ಕೆ., ಮನೋಹರ ಭಟ್ ಕುಡುಪು, ಕೆ. ಬಾಲಕೃಷ್ಣ ಕಾರಂತ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಹರೀಂದ್ರ ಟಿ. ಪೈ ಹಾಗೂ ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ ಮಯೂರ ಪ್ರತಿಷ್ಠಾನದ ಕಲಾವಿದರಿಂದ ‘ಪೀಯೂಷಲಹರಿ – ತ್ರಿಪಥಗಾಮಿನಿ ಮೋಕ್ಷದಾಯಿನಿ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಅನುಭವಿ ಕಲಾವಿದರ ಹಿಮ್ಮೇಳ ಹಾಗೂ ಮುಮ್ಮೇಳದ ಯುವ ಕಲಾವಿದರ ಸಮರ್ಥ ಅಭಿನಯದೊಂದಿಗೆ ಮೂಡಿಬಂದ ಪ್ರದರ್ಶನವು ಕಲಾಭಿಮಾನಿಗಳ ಗಮನ ಸೆಳೆಯಿತು. ಹಿರಿಯ ಕಲಾವಿದರ ಅನುಭವ ಮತ್ತು ಕಿರಿಯ ಕಲಾವಿದರ ಉತ್ಸಾಹದ ಸಮನ್ವಯವು ಮಯೂರ ಪ್ರತಿಷ್ಠಾನದ ಕಲಾತ್ಮಕ ಆಶಯವನ್ನು ಪ್ರತಿಬಿಂಬಿಸಿತು.

ಶ್ರವಣ್ ಉಡುಪ ಕತ್ತಲ್‌ಸಾರ್ ಸ್ವಾಗತಿಸಿದರು. ಪ್ರಶಾಂತ್ ಐತಾಳ್ ವಂದಿಸಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಯಕ್ಷಗಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಯುವ ಕಲಾವಿದರ ಪ್ರತಿಭೆಗೆ ಅವಕಾಶ ಕಲ್ಪಿಸುವ ಮಯೂರ ಪ್ರತಿಷ್ಠಾನದ ಪ್ರಯತ್ನಕ್ಕೆ ‘ಮಯೂರ ಯಾನ – 2’ ಮತ್ತೊಂದು ಮಹತ್ವದ ಮೈಲಿಗಲ್ಲಾಯಿತು.