ಮೋದಿ ಸರಕಾರಕ್ಕೆ 12 ವರ್ಷ – ಜೂ.5ರಿಂದ 21ರ ವರೆಗೆ ಜಿಲ್ಲೆಯಾದ್ಯoತ ಅಭಿಯಾನ ಯಶಸ್ವಿಗೊಳಿಸಿ : ಕುತ್ಯಾರು ನವೀನ್ ಶೆಟ್ಟಿ

0
5

ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಐತಿಹಾಸಿಕ ಸಾಧನೆಗಳೊಂದಿಗೆ ಜೂ.7ರಂದು ಯಶಸ್ವೀ 12 ವರ್ಷಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ಜೂ.5ರಿಂದ 21ರ ವರೆಗೆ ಜಿಲ್ಲೆಯಾದ್ಯoತ ನಡೆಯಲಿರುವ ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಅಭಿಯಾನದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೂ.5ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ರೈತ ಮೋರ್ಚಾದ ಸಹಯೋಗದೊಂದಿಗೆ ನೀಲಾವರದ ಗೋಶಾಲೆಯಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರ ಉಪಸ್ಥಿತಿಯಲ್ಲಿ ಗೋಪೂಜೆಯೊಂದಿಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ‘ಏಕ್ ಪೇಡ್ ಮಾ ಕೆ ನಾಮ್’ ಶೀರ್ಷಿಕೆಯಡಿ ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಮಂಡಲಗಳು ಮತ್ತು ಬೂತ್ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

17 ದಿನಗಳ ಅಭಿಯಾನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ, ಮಾಧ್ಯಮ ಸಂವಾದ, ವಿಶೇಷ ಸಂಪರ್ಕ ಅಭಿಯಾನ, ಸ್ವಚ್ಛತಾ ಅಭಿಯಾನ, ಪ್ರಗತಿ ಪಥ ಯಾತ್ರೆ, ವಿಕಸಿತ ಭಾರತ ಸಂಕಲ್ಪ ಸಮಾವೇಶ, ಸಭಾಂಗಣದ ಸಭೆಗಳು, ಕಲ್ಯಾಣ ಶಿಬಿರ, ಮೋದಿ ಸರಕಾರದ ಸಾಧನೆಗಳ ಪ್ರದರ್ಶಿನಿ, ಸಾವಯವ ಕೃಷಿ ಕಾರ್ಯಾಗಾರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯoತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.

ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಅಭಿಯಾನದ ಅಂಗವಾಗಿ ಜಿಲ್ಲಾ, ಮಂಡಲ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾಗಿರುವ ಕಾರ್ಯಕ್ರಮಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ಅಭಿಯಾನದ ಮಂಡಲ ತಂಡದ ಸಂಚಾಲಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿ, ಅಭಿಯಾನದ ಉದ್ಘಾಟನೆಯ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here