ವರಂಗ ಗ್ರಾಮ ಪಂಚಾಯತ್ ಪಡುಕುಡೂರು ಭಾಗದ ನಿಕಟಪೂರ್ವ ಸದಸ್ಯರು ಹಾಗೂ ಮುನಿಯಾಲು ಗಾಂಧಿಮೈದಾನ ನಿವಾಸಿಯಾಗಿದ್ದ ಸಂತೋಷ್ ನಾಯ್ಕ್ (43) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಬುಧವಾರ ಮನೆಯಲ್ಲಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಸಂತೋಷ್ ನಾಯ್ಕ್ ಅವರು ಶ್ರೀ ಮಹಾಗಣಪತಿ ಸೇವಾ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು, ಕಲಾ ಪೋಷಕರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೆ ಮುನಿಯಾಲು ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಮಾಜಮುಖಿ ಚಟುವಟಿಕೆಗಳ ಮೂಲಕ ಸ್ಥಳೀಯರಲ್ಲಿ ಆತ್ಮೀಯತೆ ಗಳಿಸಿದ್ದರು.
ಮೃತರು ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ. ಅಪಾರ ಬಂಧುಬಳಗ ಮತ್ತು ಸ್ನೇಹಿತರ ವಲಯವನ್ನು ಅವರು ಹಿಂದೆ ಬಿಟ್ಟಿದ್ದಾರೆ.
ಪಡುಕುಡೂರಿನಲ್ಲಿ ಅಂತಿಮ ದರ್ಶನ
ಸಂತೋಷ್ ನಾಯ್ಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗುರುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪಡುಕುಡೂರಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅನೇಕ ಬಂಧುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ಮುನಿಯಾಲು ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಸದಸ್ಯರು, ಮಿತ್ರವರ್ಗದವರು ಹಾಗೂ ಸ್ಥಳೀಯರು ಸೇರಿ ಸಂತೋಷ್ ನಾಯ್ಕ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಮುನಿಯಾಲಿಗೆ ಕೊಂಡೊಯ್ದರು.

