ಚೆನ್ನೈ: ರೌಡಿಗಳು, ಕಳ್ಳರು, ಕೊಲೆ ಪಾತಕಿಗಳನ್ನು ಹಿಡಿಯಲು ಪೊಲೀಸರು ನಾನಾ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಹಾಗೆಯೇ ಕೊಲೆ ಪಾತಕಿಯನ್ನು ಹಿಡಿಯಲು ತಮಿಳುನಾಡು ಪೊಲೀಸರು ಮಾಡಿರುವ ಸಾಹಸದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಹೆದ್ದಾರಿಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಕಾರು ಬಾಗಿಲು ಹಿಡಿದು ನೇತಾಡಿರುವ ವಿಡಿಯೋ ಇದಾಗಿದೆ.
ಮಯಿಲೈ ಶಿವಕುಮಾರ್ ಎಂಬ ವ್ಯಕ್ತಿಯ ಕೊಲೆ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದರು. ಅಲಗುರಾಜ ತಿರುವಲ್ಲೂರು ಜಿಲ್ಲೆಯಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುಳಿವಿನ ಮೇರೆಗೆ, ಅವನನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಯಿತು. ಪೊಲೀಸರು ಹತ್ತಿರ ಬರುತ್ತಿದ್ದಂತೆ ಅಲಗುರಾಜ ಹೆದ್ದಾರಿಯಲ್ಲಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಜಾಮ್ ಬಜಾರ್ ಸಬ್-ಇನ್ಸ್‌ಪೆಕ್ಟರ್ ಆನಂದ ಕುಮಾರ್ ಕಾರನ್ನು ಹಾರಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಕಾರಿನ ಬಾಗಿಲು ಹಿಡಿದು ನೇತಾಡಿದ್ದರು. ಕೊನೆಗೆ ನಡು ರಸ್ತೆಯಲ್ಲಿ ಅವರನ್ನು ತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ.