ಮೂಡುಬಿದಿರೆ : ವಯಸ್ಸಿನ ಅಮೂಲ್ಯ ಅವಧಿಯನ್ನು ಮೊಬೈಲ್ ವ್ಯಸನದಲ್ಲಿ ಕಳೆಯದೆ, ಪಠ್ಯ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ನಿರಂತರ ಪ್ರಯತ್ನದಿಂದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ. ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಹೇಳಿದರು.
ಯುವವಾಹಿನಿ ಮೂಡುಬಿದಿರೆ ಘಟಕವು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಮೃತ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಅರಿವು-2026’ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಜೀವನ-ಸಂದೇಶ ಗೋಷ್ಠಿ, 20 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಯುವಸಿರಿ ಹಾಗೂ ಶ್ರೀ ಹರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವವಾಹಿನಿ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಪೂಂಜಾಲಕಟ್ಟೆಯ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಎಸ್. ಸನಿಲ್ ‘ಗುರು ಸಂದೇಶ’ ನೀಡಿದರು. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸಂಸ್ಕೃತ ಸಹಿತ ತ್ರಿಭಾಷಾ ಸೂತ್ರವನ್ನು ಅನುಸರಿಸುವುದು ಅಗತ್ಯ. ಸಮಾಜ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿರುವಂತೆ, ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಎಸ್. ಸನಿಲ್, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೂತನ ಅಧ್ಯಕ್ಷ ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನವೀನ್ ಚಂದ್ರ ಕರ್ಕೇರ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ಸಾವ್ಯ, ಮೂಡುಬಿದಿರೆ ಘಟಕದ ಯುವಸ್ಪಂದನ ಸೇವಾ ಯೋಜನೆಯ ಅಧ್ಯಕ್ಷ ನವಾನಂದ, ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕಿ ಯೋಗಿತಾ ನವಾನಂದ, ವಿದ್ಯಾನಿಧಿ ನಿರ್ದೇಶಕ ದಯಾನಂದ ಮಾಸ್ತಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಯುಸಿಯಲ್ಲಿ ಶೇ.100 ಅಂಕ ಗಳಿಸಿದ ದಿಶಾ ಪೂಜಾರಿ ಸೇರಿದಂತೆ ತೃಷಾ ಯು. ಪೂಜಾರಿ, ಕಾವ್ಯಶ್ರೀ (ಶೇ.98.17) ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆಗೈದ ಪ್ರೇಕ್ಷಾ ಅವರಿಗೆ ಶ್ರೀ ಹರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಒಟ್ಟು 49 ವಿದ್ಯಾರ್ಥಿಗಳಿಗೆ ಯುವಸಿರಿ ಪ್ರಶಸ್ತಿ ಹಾಗೂ ಗೌರವಧನ, 20 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದೇ ವೇಳೆ ನಾಲ್ವರು ಯುವವಾಹಿನಿಯ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ನವಾನಂದ ಸ್ವಾಗತಿಸಿದರು. ಶಂಕರ ಕೋಟ್ಯಾನ್ ಮತ್ತು ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್ ನಿರೂಪಿಸಿದರು. ಕಾರ್ಯದರ್ಶಿ ಮೇಘನಾ ವಂದಿಸಿದರು.

