ಡಾ.ಶಿರೂರು ಅವರಿಗೆ ನ್ಯಾಷನಲ್ ಐಕಾನ್ ಅವಾರ್ಡ್: ಮಂಜುನಾಥ ಶಿವಕ್ಕನವರ್

0
6

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರು ನ್ಯಾಷನಲ್ ಐಕಾನ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ ಎಂದು ಧಾರವಾಡದ ಚಿರಾಯು ಕನ್ನಡ ವಾಹಿನಿಯ ಸಂಸ್ಥಾಪಕರಾದ ಶ್ರೀ ಮಂಜುನಾಥ ಎನ್. ಶಿವಕ್ಕನವರ್ ಅವರು ತಿಳಿಸಿರುತ್ತಾರೆ. 2026 ಜುಲೈ 19 ರಂದು ಧಾರವಾಡದ ಆಲೂರು ವೆಂಕಟರಾಯ ಸಭಾಭವನದಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಕಳೆದ ಮೂರು ದಶಕಗಳಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢ ಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯ ಸೌರಭ ಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಮೂಡುಬಿದಿರೆ ಪರಿಸರದ ವಿದ್ಯಾಸಂಸ್ಥೆಗಳಲ್ಲಿ ನೂರಾರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ನೃತ್ಯ ಸೌರಭ, ಯಕ್ಷ ಸೌರಭ, ಗಾನ ಸೌರಭ ತರಬೇತಿ ಮತ್ತು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುತ್ತಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕಕ ಸಂಘದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಘಟಕದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಪದಾಧಿಕಾರಿಗಳಾಗಿ ಕಳೆದ 30 ವರ್ಷಗಳಿಂದ ಶಿಕ್ಷಕ ಸಂಘಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಶಿಕ್ಷಣ, ಶಿಕ್ಷಕ ಸಂಘಟನೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಡಾ. ರಾಮಕೃಷ್ಣ ಶಿರೂರು ಅವರಿಗೆ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಲಭಿಸಲಿ ಎಂದು ಹಾರೈಸಿ ಚಿರಾಯು ಕನ್ನಡ ವಾಹಿನಿಯ ಸಂಸ್ಥಾಪಕರಾದ ಶ್ರೀ ಮಂಜುನಾಥ ಎನ್. ಶಿವಕ್ಕನವರ್, ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಮಹದೇವಪ್ಪ ಗುರುನಾಥಪ್ಪ ಕಮ್ಮಾರ ಮತ್ತು ಪ್ರತಿಫಲ ಫೌಂಡೇಶನ್ ಧಾರವಾಡ ಇದರ ಸಂಸ್ಥಾಪಕ ಅಧ್ಯಕ್ಷರಾದ ಕುಮಾರಿ ಪೂಜಾ ಹನುಮಂತಪ್ಪ ಬಡಿಗೇರ್ ಅವರ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.