ನಿಟ್ಟೆ ಗರಡಿಯಲ್ಲಿ ಮಹಮ್ಮಾಯಿ ದೇವಿಗೆ ಪೂಜಾ ಸೇವೆ , ವಿಶೇಷ ಪ್ರಾರ್ಥನೆ

0
8

ಕಾರ್ಕಳ : ತುಳುನಾಡಿನ ಗ್ರಾಮೀಣ ಜನಜೀವನದಲ್ಲಿ ಇಂದಿಗೂ ಜೀವಂತವಾಗಿರುವ ವಿಶಿಷ್ಟ ಸಂಪ್ರದಾಯವೊಂದನ್ನು ನಿಟ್ಟೆ ಗ್ರಾಮದ ಹತ್ತು ಸಮಸ್ತರು ಸೇರಿಕೊಂಡು ನೆರವೇರಿಸಿದ್ದಾರೆ. ಪಕ್ಕದ ಕಲ್ಯಾ ಗ್ರಾಮದವರು ನಿಟ್ಟೆ ಗ್ರಾಮದ ಗಡಿ ಪ್ರದೇಶವಾದ ಬಪ್ಪಗೋಳಿ ಬಳಿ ಬಿಟ್ಟುಹೋದ ‘ಮಾರಿ’ಯನ್ನು ನಿಟ್ಟೆ ಗ್ರಾಮದವರು ಸಂಪ್ರದಾಯಬದ್ಧವಾಗಿ ಪೂಜಿಸಿ, ಬಳಿಕ ನೆರೆಯ ಅತ್ತೂರು ಗ್ರಾಮದ ಗಡಿಯಲ್ಲಿ ಬಿಟ್ಟು ಬಂದರು.

ಮೊದಲಿಗೆ ನಿಟ್ಟೆ ಗರಡಿಯಲ್ಲಿ ಮಹಮ್ಮಾಯಿ ದೇವಿಗೆ ಪೂಜಾ ಸೇವೆ ಸಲ್ಲಿಸಿ, ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ತೆಂಗಿನ ಗರಿಯಿಂದ ತಯಾರಿಸಿದ ಸಾಂಪ್ರದಾಯಿಕ ದೀವಟಿಗೆಯಾದ ‘ಸೂಟೆ’ಯನ್ನು ಬೆಳಗಿಸಿ, ಅದರೊಂದಿಗೆ ಮೆರವಣಿಗೆ ನಡೆಸಲಾಯಿತು. ನಿಟ್ಟೆ ಗ್ರಾಮದ ಗಡಿಯನ್ನು ದಾಟಿ ಅತ್ತೂರು ಗ್ರಾಮದ ಗಡಿಯವರೆಗೆ ತೆರಳಿದ ಗ್ರಾಮಸ್ಥರು ಅಲ್ಲಿ ಮಾರಿಯನ್ನು ಬಿಟ್ಟು ಹಿಂದಿರುಗಿದರು.

ಗ್ರಾಮಕ್ಕೆ ಯಾವುದೇ ಕೆಡುಕು, ರೋಗ-ರುಜಿನ ಅಥವಾ ಅಶುಭ ಉಂಟಾಗದಿರಲಿ, ಗ್ರಾಮದ ಜನರಿಗೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂಬ ನಂಬಿಕೆ ಹಾಗೂ ಪ್ರಾರ್ಥನೆಯೊಂದಿಗೆ ಈ ಸೇವೆಯನ್ನು ನೆರವೇರಿಸಲಾಗುತ್ತದೆ.

ತುಳುನಾಡಿನ ಗ್ರಾಮೀಣ ಜನಜೀವನದಲ್ಲಿ ಕಂಡುಬರುವ ‘ಮಾರಿ ಓಡಿಸುವ’ ಸಂಪ್ರದಾಯ ಹಾಗೂ ಮಹಮ್ಮಾಯಿ ಆರಾಧನೆಯು ಸ್ಥಳೀಯ ಜನಪದ ನಂಬಿಕೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಆಚರಣೆಯಾಗಿದೆ. ಇಂತಹ ಆಚರಣೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಗ್ರಾಮಸ್ಥರ ಒಗ್ಗಟ್ಟು ಹಾಗೂ ಸಾಂಪ್ರದಾಯಿಕ ಜೀವನ ಪದ್ಧತಿಯನ್ನೂ ಪ್ರತಿಬಿಂಬಿಸುತ್ತವೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ತಿಳಿಸಿದ್ದಾರೆ.