ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳಿಂದ ಬ್ರಹ್ಮಾವರ ರುಡ್‌ಸೆಟ್‌ ಸಂಸ್ಥೆಗೆ ಭೇಟಿ

0
7

ಬ್ರಹ್ಮಾವರ: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಗ್ರಾಮೀಣ ಕೌಶಲ್ಯ ವಿಭಾಗದ ಅಧಿಕಾರಿಗಳಾದ ಶಿಶ್ ಸಿನ್ಹಾ ಹಾಗೂ ಅಬು ಓ. ಎಸ್. ಅವರು ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ತರಬೇತಿ ಸೌಲಭ್ಯಗಳನ್ನು ಪರಿಶೀಲಿಸಿದರು.

ಭೇಟಿಯ ಸಂದರ್ಭದಲ್ಲಿ ಅಧಿಕಾರಿಗಳು ಸಂಸ್ಥೆಯ ಸಂಪೂರ್ಣ ಆವರಣ, ತರಬೇತಿ ಕೊಠಡಿಗಳು, ವಸತಿ ನಿಲಯ, ಮೆಸ್ ಬ್ಲಾಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.

ನಂತರ ಸಂಸ್ಥೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮೀನುಗಾರಿಕೆ (Pisciculture) ಹಾಗೂ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರಗಳ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ತರಬೇತಿಯ ಮಹತ್ವ, ಲಭ್ಯವಿರುವ ಸೌಲಭ್ಯಗಳ ಸದುಪಯೋಗ ಹಾಗೂ ತರಬೇತಿಯ ನಂತರ ಸ್ವಯಂ ಉದ್ಯೋಗ ಆರಂಭಿಸುವ ಕುರಿತು ಶಿಬಿರಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ತರಬೇತಿಯಲ್ಲಿ ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಂಸ್ಥೆಯ ವ್ಯವಸ್ಥಿತ ಕಾರ್ಯನಿರ್ವಹಣೆ, ತರಬೇತಿ ಸೌಲಭ್ಯಗಳು ಹಾಗೂ ಸಿಬ್ಬಂದಿಯ ತಂಡಕಾರ್ಯವನ್ನು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.