ಬೆಂಗಳೂರು : ಪಡಿತರ ಚೀಟಿ ಕೇವಲ ರೇಷನ್ ಪಡೆಯಲು ಮಾತ್ರವಲ್ಲದೆ, ವಿವಿಧ ಸರ್ಕಾರಿ ಸೌಲಭ್ಯಗಳು ಹಾಗೂ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಪ್ರಮುಖ ದಾಖಲೆಯಾಗಿ ಬಳಸಲಾಗುತ್ತದೆ. ಹೀಗಾಗಿ ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಸೇರಿದಂತೆ ಯಾವುದೇ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಇದೀಗ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಅಗತ್ಯ ತಿದ್ದುಪಡಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆ ಸೇರಿದಂತೆ ವಿವಿಧ ಬದಲಾವಣೆಗಳಿಗೆ ಅರ್ಜಿ ಸಲ್ಲಿಸಬಹುದು. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ತಿಳಿಸಲಾಗಿದೆ.
ಎಲ್ಲಿ ಅರ್ಜಿ ಸಲ್ಲಿಸಬಹುದು?
ಪಡಿತರ ಚೀಟಿ ತಿದ್ದುಪಡಿಗಾಗಿ ಅರ್ಹರು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೈಬರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಯಾವೆಲ್ಲಾ ತಿದ್ದುಪಡಿಗೆ ಅವಕಾಶ?
- ಹೆಸರು ತಿದ್ದುಪಡಿ
- ಕುಟುಂಬ ಸದಸ್ಯರ ಹೆಸರು ಸೇರ್ಪಡೆ
- ಹೆಸರು ತೆಗೆದುಹಾಕುವುದು
- ವಿಳಾಸ ಬದಲಾವಣೆ
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ನ್ಯಾಯಬೆಲೆ ಅಂಗಡಿ ಬದಲಾವಣೆ
- ಛಾಯಾಚಿತ್ರ ಬದಲಾವಣೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
- ಪ್ರಸ್ತುತ ಪಡಿತರ ಚೀಟಿ
- ಕುಟುಂಬದ ಛಾಯಾಚಿತ್ರ
- ವಿಳಾಸದ ದಾಖಲೆ
- ಆರು ವರ್ಷ ಮೇಲ್ಪಟ್ಟ ಸದಸ್ಯರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆರು ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ
ಪತ್ನಿಯ ಹೆಸರು ಸೇರ್ಪಡೆಗೆ
- ಆಧಾರ್ ಕಾರ್ಡ್
- ವಿವಾಹ ಪ್ರಮಾಣಪತ್ರ
- ಪೋಷಕರ ಪಡಿತರ ಚೀಟಿ
ಮಗುವಿನ ಹೆಸರು ಸೇರ್ಪಡೆಗೆ
- ಮಗುವಿನ ಜನನ ಪ್ರಮಾಣಪತ್ರ
- ಪೋಷಕರ ಆಧಾರ್ ಕಾರ್ಡ್
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಪಡಿತರ ಚೀಟಿ ತಿದ್ದುಪಡಿಗಾಗಿ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಇ-ಸೇವೆಗಳು ವಿಭಾಗದಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ಸಂಬಂಧಿಸಿದ ಆಯ್ಕೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿಯನ್ನು ನಮೂದಿಸಿ, ಸಂಬಂಧಿಸಿದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಗಳು ಹಾಗೂ ದಾಖಲೆಗಳು ಸರಿಯಾಗಿದ್ದಲ್ಲಿ, ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನವೀಕರಿಸಿದ ಪಡಿತರ ಚೀಟಿಯನ್ನು ಪಡೆಯಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣ ahara.kar.nic.in ಅನ್ನು ಪರಿಶೀಲಿಸಬಹುದು.

