ಸ್ಪರ್ಧಾ ಸಂಭ್ರಮ ಹವ್ಯಕ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಲು ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು : ಡಾ. ಎನ್. ಜಿ. ಹೆಗಡೆ ಪುಣೆ
ಮುಂಬಯಿ : ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ, ಕಲೆ-ಸಂಸ್ಕೃತಿಯ ಉಳಿವಿಗಾಗಿ ಕಳೆದ 30 ವರ್ಷಗಳಿಂದ ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರತಿಬಿಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಇದೇ ಮೊಟ್ಟಮೊದಲ ಬಾರಿಗೆ ಮುಂಬೈ ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮ ಆಗಸ್ಟ್ 30ರಂದು ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಸಹಯೋಗದೊಂದಿಗೆ ಅದ್ದೂರಿಯಾಗಿ ಸಾಂತಕ್ರೋಸ್ ಪೂರ್ವದ ಪೇಜಾವರ ಮಠದಲ್ಲಿ ಸಂಪನ್ನವಾಯಿತು.
ಮುಂಬೈ ಪ್ರತಿಬಿಂಬ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಡಾ. ಎನ್. ಜಿ. ಹೆಗಡೆ ಪುಣೆ ಯವರು ಮಕ್ಕಳನ್ನ ಸಂಸ್ಕಾರವಂತರನ್ನಾಗಿ ಬೆಳೆಸುವ ಜವಾಬ್ದಾರಿಗಳ ಕುರಿತಾಗಿ ಮಾತನಾಡುತ್ತಾ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯಗಳನ್ನು ಪಾಲಕರು ಮಾಡಬೇಕು. ಕೇವಲ ಶಿಕ್ಷಣವೇ ಮೂಲವಲ್ಲ ಅವರ ಪ್ರತಿಭೆಗಳು ಬೆಳಕಿಗೆ ತರುವ ಕಾರ್ಯಗಳು ಮುಖ್ಯವಾಗಿದೆ. ಹವ್ಯಕ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಲು ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು
.ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಅಧ್ಯಕ್ಷರಾದ ವಿಷ್ಣು ಭಾಗ್ವತ್ ಮಾತನಾಡಿ ಮೊಟ್ಟಮೊದಲ ಬಾರಿಗೆ ಮುಂಬೈಲಿ ಪ್ರತಿಬಿಂಬ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಮತ್ತು ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಜಂಟಿಯಾಗಿ ಹಲವು ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಭರವಸೆ ನೀಡಿದರು. ಅಭ್ಯಾಗತರಾಗಿ ಮಾತನಾಡಿದ ನ್ಯಾಯವಾದಿಗಳಾದ ಅಮಿತಾ ಭಾಗ್ವತ್ ಸಂಘಟನೆ ಸದೃಢವಾಗಿದ್ದಾಗ, ಸಂಘಟನೆಯ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಇಂತಹ ಯಶಸ್ವಿ ಸಮಾರಂಭ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವೆ ಕ್ಷೇತ್ರದಿಂದ ಎನ್. ಆರ್. ಹೆಗಡೆ ಕುಮಟಾ, ಉದ್ಯಮ ಕ್ಷೇತ್ರದಿಂದ ಆರ್. ಜಿ. ಭಟ್ ಹಳ್ಕಾರ್, ಶಿಕ್ಷಣ ಕ್ಷೇತ್ರದಿಂದ ವಿ.ಎನ್.ಹೆಗಡೆ ಹಾವಳಿಮನೆ, ಸಾಹಿತ್ಯ ಕ್ಷೇತ್ರದಿಂದ ಡಾ. ಶೈಲಜಾ ಹೆಗಡೆ ಕೂಡ್ಮನೆ ಹಾಗೂ ವೈದ್ಯಕೀಯ ಕ್ಷೇತ್ರದಿಂದ ಡಾ. ಅಪರ್ಣಾ ಹೆಗಡೆ ಕುಮಟಾ ಇವರ ಸಾಧನೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು ಮಾತಾನಾಡಿ ಪ್ರತಿಬಿಂಬ ಕಾರ್ಯಕ್ರಮ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಕಳೆದ ಮೂರು ದಶಕಗಳಿಂದ ಹವ್ಯಕ ಮಹಾಸಭೆ ನಿರಂತರವಾಗಿ ಈ ಕಾರ್ಯಕ್ರಮವನ್ನ ನಡೆಸುತ್ತಾ ಬಂದಿದೆ. ಈ ಸಾಲಿನಲ್ಲಿ 14 ಪ್ರಾಂತ್ಯಗಳಲ್ಲಿ ಪ್ರತಿಬಿಂಬ ಸ್ಪರ್ಧಾ ಸೌರಭ ನಡೆಯಲಿದೆ.
ಈ ಸಾಂಸ್ಕೃತಿಕ ಉತ್ಸವ ಪ್ರತಿ ವರ್ಷವೂ ಮುಂಬೈ ಪ್ರಾಂತ್ಯದಲ್ಲಿ ನಡೆಯಲಿ ಎಂದು ಕರೆ ನೀಡಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾಜದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾ ಪ್ರೋತ್ಸಾಹ ಧನ, ಆರ್ಥಿಕವಾಗಿ ಹಿಂದುಳಿದ ಸಮಾಜದ ಅಶಕ್ತರಿಗೆ ನೀಡುವ ಆರ್ತ ಸಹಾಯ ನಿಧಿ, ಬೆಂಗಳೂರಿನಲ್ಲಿರುವ ವಿದ್ಯಾರ್ಥಿ ನಿಲಯಗಳು, ಉಚಿತ ಆರೋಗ್ಯ ಶಿಬಿರ, ಮಹಾಸಭೆಯ ಸಭಾಭವನಗಳು ಮುಂತಾದ ಸೌಲಭ್ಯಗಳ ಬಗ್ಗೆ ಹಾಗೂ ಮಹಾಸಭಾ ಆಯೋಜಿಸುತ್ತಿರುವ ವಿಜಯೀಭವ, ಸಂಸ್ಕಾರೋತ್ಸವ, ಗಾಯತ್ರಿ ಮಹೋತ್ಸವದಂತ ಸಮಾರಂಭಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ತೃತೀಯ ಹವ್ಯಕ ಸಮ್ಮೇಳನದ ಅಭೂತಪೂರ್ವ ಯಶಸ್ಸನ್ನು ಸ್ಮರಿಸಿಕೊಂಡರು. ಮಹಾಸಭೆ ಕಾಲ ಕಾಲಕ್ಕೆ ಆಯೋಜನೆ ಮಾಡುವ ಶಿಕ್ಷಕರ ಸಮಾವೇಶ, ವೈದಿಕರ ಸಮಾವೇಶ, ವಕೀಲರ ಸಮಾವೇಶ, ಉದ್ಯಮಿಗಳ ಸಮಾವೇಶ, ಇಂಜಿನಿಯರ್ ಸಮಾವೇಶಗಳ ಉದ್ಧೇಶಗಳನ್ನು ವಿವರಿಸಿದರು.
ಹವ್ಯಕ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ವಿಷ್ಣು ಭಾಗ್ವತ್, ಶ್ರೀ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು, ಮಹಾಸಭಾ ನಿರ್ದೇಶಕ ರಮಣ ಎಸ್ ಭಟ್, ಹವ್ಯಕ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ವಸಂತ ಭಟ್, ಪ್ರತಿಬಿಂಬ ಕೇಂದ್ರ ಸಂಚಾಲಕ ದೀಪಕ ಹೆಗಡೆ ಗೋಳಿಕೈ, ಹವ್ಯಕ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ ಭಟ್, ಮುಂಬೈ ಪ್ರತಿಬಿಂಬ ಸಂಚಾಲಕರಾದ ಗಣಪತಿ ವಿ ಹೆಗಡೆ ಭದ್ರನ್, ಮುಂಬೈ ಹವ್ಯಕ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಭಟ್, ಹವ್ಯಕ ವೆಲ್ಫೇರ್ ಟ್ರಸ್ಟ್ ಖಜಾಂಚಿಗಳಾದ ಗಣೇಶ್ ಭಟ್ ವೇದಿಕೆಯಲ್ಲಿದ್ದರು. ಪ್ರಪ್ರಥಮವಾಗಿ ನಡೆದ ಮುಂಬೈ ಪ್ರತಿಬಿಂಬ ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಸಹಯೋಗ, ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು.

