ಉಳ್ಳಾಲ ತಾಲೂಕು ತುಳುವ ಮಹಾಸಭೆಗೆ ಯುವ ನಾಯಕ: ಪವನ್ ರಾಜ್ ಕೊಲ್ಯ ನೇಮಕ

0
22

ಉಳ್ಳಾಲ: ತುಳುನಾಡಿನ ಅಸ್ಮಿತೆಯ ಪ್ರತೀಕವಾಗಿರುವ ತುಳುವ ಮಹಾಸಭೆ, ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಈ ಉದ್ದೇಶದೊಂದಿಗೆ, ಉಳ್ಳಾಲ ತಾಲೂಕು ಘಟಕದ ಸಂಚಾಲಕರಾಗಿ ಯುವ ನಾಯಕ, ಬಿಬಿಎಂ ಪದವೀಧರ ಹಾಗೂ ತುಳು ಭಾಷಾ–ಸಂಸ್ಕೃತಿಯ ಸೇವಾಭಿಮಾನಿ ಪವನ್ ರಾಜ್ ಕೊಲ್ಯ ಅವರನ್ನು ನೇಮಕ ಮಾಡಲಾಗಿದೆ.

ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಾರಂಭ ಹಂತದಲ್ಲೇ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದ ಪವನ್ ರಾಜ್, ತುಳು ಭಾಷೆಯ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ನಿಷ್ಠೆಯಿಂದ ಹಲವಾರು ಕಾರ್ಯಗಳಲ್ಲಿ ತೊಡಗಿಸಿ ನಾಡು–ನುಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಉಳ್ಳಾಲ ಚಿರುಂಬ ಭಗವತಿ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

1928ರಲ್ಲಿ ಎಸ್.ಯು. ಪಣಿಯಾಡಿಯವರ ನೇತೃತ್ವದಲ್ಲಿ ಉಡುಪಿಯಲ್ಲಿ ಆರಂಭವಾದ ತುಳುವ ಮಹಾಸಭೆ, ಈಗ ಶತಮಾನೋತ್ಸವದ ಸಂಭ್ರಮದತ್ತ ಪಯಣಿಸುತ್ತಿದೆ. ಈ ನಿಟ್ಟಿನಲ್ಲಿ ಕಲಾ, ಸಾಹಿತ್ಯ, ಜನಪದ ಪರಂಪರೆಗಳ ಪುನಶ್ಚೇತನ, ತುಳುನಾಡನ್ ಕಳರಿ ತರಬೇತಿ ಹಾಗೂ ಮರ್ಮ ಚಿಕಿತ್ಸೆ, ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಜಾತಿ–ಮತ–ಭಾಷಾ ಸೌಹಾರ್ದತೆ ಕಾಪಾಡುವಂತಹ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಈ ಯೋಜನೆಗಳನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ತಾಲೂಕು ಮಟ್ಟದಲ್ಲಿ ಅಲ್ಲಲ್ಲಿ ತುಳುವ ಮಹಾಸಭೆ ಘಟಕಗಳನ್ನು ಪುನಶ್ಚೇತನಗೊಳಿಸಲಾಗುತ್ತಿದ್ದು, ಪವನ್ ರಾಜ್ ಕೊಲ್ಯ ಅವರ ನೇತೃತ್ವದಲ್ಲಿ ಉಳ್ಳಾಲ ತಾಲೂಕಿನಲ್ಲಿ ಈ ಚಟುವಟಿಕೆಗಳಿಗೆ ನೇತೃತ್ವ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here