ಲಯನ್ಸ್ ಕ್ಲಬ್ ಮುದರಂಗಡಿ ವತಿಯಿಂದ ‘ಶಾಂತಿ ಪೋಸ್ಟರ್ ಸ್ಪರ್ಧೆ’ ಆಯೋಜನೆ

0
5

ನಂದಿಕೂರು: ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317 ಸಿ ವ್ಯಾಪ್ತಿಯ ಲಯನ್ಸ್ ಕ್ಲಬ್ ಮುದರಂಗಡಿ ವತಿಯಿಂದ ನಂದಿಕೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 3, 2026 ರಂದು ಅಂತಾರಾಷ್ಟ್ರೀಯ ಶಾಂತಿ ಪೋಸ್ಟರ್ ಸ್ಪರ್ಧೆಯನ್ನು (Peace Poster Contest 2026) ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಎ. ವಿನ್ಸೆಂಟ್ ಡಿಸೋಜಾ -ದುರ್ಗದಕಟ್ಠೆ, ಉಪಸ್ಥಿತರಿದ್ದು, ಸ್ಪರ್ಧೆಯ ನಿಯಮಾವಳಿಗಳು ಹಾಗೂ 2026ರ ಸಾಲಿನ ಜಾಗತಿಕ ಶಾಂತಿ ಪರಿಕಲ್ಪನೆ ಮಾನವೀಯತೆಯಲ್ಲಿ ಸಾಮರಸ್ಯ(Harmony in Humanity) ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಈ ವಿಶಿಷ್ಟ ಸ್ಪರ್ಧೆಯಲ್ಲಿ ಶಾಲೆಯ ಒಟ್ಟು 36 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಸೃಜನಶೀಲ ಚಿತ್ರಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಗಣ್ಯ ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಲಕ್ಷ್ಮಣ್ ಶೆಟ್ಟಿ,ನಂದಿಕೂರು, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಾಧು, ಉಪ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಹಾಗೂ ಚಿತ್ರಕಲಾ ಶಿಕ್ಷಕರಾದ ಪದ್ಮನಾಭ ಆಚಾರ್ಯ ಅವರು ಉಪಸ್ಥಿತರಿದ್ದರು. ಶಾಲೆಯ ಬೋಧಕ ಹಾಗೂ ಸಹಾಯಕ ಸಿಬ್ಬಂದಿ ವರ್ಗದವರು ಸ್ಪರ್ಧೆಯ ಸುಗಮ ನಿರ್ವಹಣೆಗೆ ಸಹಕರಿಸಿದರು.

ಲಯನ್ಸ್ ಕ್ಲಬ್ ಮುದರಂಗಡಿಯ ಕಾರ್ಯದರ್ಶಿ ಲ. ಲಾರೆನ್ಸ್ ಡಿಸೋಜಾ ಮತ್ತು ಕೋಶಾಧಿಕಾರಿ ಲ. ಫೆಲಿಕ್ಸ್ ಡಿಸೋಜಾ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿದರು. ವಿದ್ಯಾರ್ಥಿಗಳಲ್ಲಿ ಜಾಗತಿಕ ಶಾಂತಿಯ ಸಂದೇಶ ಹಾಗೂ ಕಲಾತ್ಮಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಲಯನ್ಸ್ ಕ್ಲಬ್ ಮುದರಂಗಡಿ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.