ರಾಜ್ಯ ಸರ್ಕಾರ ಅಂತರ್ಜಾತಿ ವಿವಾಹವಾಗುವ ದಂಪತಿ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸದಾಗಿ ಮರ್ಯಾದಾ ಹತ್ಯೆ ತಡೆ ಕಾಯ್ದೆ ಜಾರಿಗೆ ಮುಂದಾಗಿದ್ದು, ಸರ್ಕಾರವು ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಕಾಯ್ದೆಯು ಪ್ರಗತಿಪರವಾಗಿದ್ದರೂ ಪ್ರಾಯೋಗಿಕವಾಗಿ ಜಾರಿ ಸಂಕೀರ್ಣ ಸಮಸ್ಯೆಗಳಿಗೆ ದಾರಿ ಮಾಡಲಿದೆ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ದಂಪತಿಯ ಬಗ್ಗೆ ಸಮಾಜದಲ್ಲಿ ಕೆಟ್ಟದಾಗಿ ಬಿಂಬಿಸುವುದು ಅಥವಾ ಸುಳ್ಳು ಮಾಹಿತಿ ಹರಡುವುದನ್ನು ಈ ಕಾಯ್ದೆ ಶಿಕ್ಷಾರ್ಹ ಅಪರಾಧ ಎಂದಿದೆ. ಆದರೆ, ಮೌಖಿಕವಾಗಿ ಹರಡುವ ಇಂತಹ ವಿಚಾರಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಒಂದು ದೊಡ್ಡ ಸವಾಲಾಗಬಹುದು. ಕುಟುಂಬ ಗೌರವದ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳನ್ನು ಈ ಕಾಯ್ದೆ ಗುರುತಿಸಿದೆ. ಆದರೆ ಕಾನೂನು ಪ್ರಕ್ರಿಯೆಯಲ್ಲಿ ‘ಗೌರವದ ಹೆಸರಿನ ದೌರ್ಜನ್ಯ’ ಮತ್ತು ‘ಸಾಮಾನ್ಯ ಕೌಟುಂಬಿಕ ಕಲಹ’ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟವಾಗಬಹುದು. ದಂಪತಿಗಳ ಫೋನ್ ಅಥವಾ ಲ್ಯಾಪ್‌ಟಾಪ್ ಕಸಿದುಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಸಾಧಾರಣ ಕೌಟುಂಬಿಕ ಜಗಳದಲ್ಲಿ ಪಾಲಕರ ವಿರುದ್ಧ ಈ ಕಾಯ್ದೆಯಡಿ ಬಳಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಹತ್ಯೆಗೆ ಶಿಕ್ಷೆ ಸ್ವಾಗತಾರ್ಹ
ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹವಾದ ದಂಪತಿಗಳನ್ನು ನಾನಾ ಬಗೆಯಲ್ಲಿ ಪೀಡಿಸಿ ಹತ್ಯೆ ಮಾಡಿದ ಉದಾಹರಣೆಗಳಿದ್ದು ಇದರಿಂದ ಬಹಳಷ್ಟು ಮಂದಿ ಯುವ ಜೋಡಿಗಳು ತೊಂದರೆ ಅನುಭವಿಸಿದ್ದಾರೆ. ಹೊಸ ಕಾಯ್ದೆ ಮೂಲಕ ಮರ್ಯಾದೆ ಹತ್ಯೆಗೆ 5 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಜೊತೆಗೆ ಅಂತರ್ಜಾತಿ ವಿವಾಹಿತ ಮಹಿಳೆಗೆ ಬಲವಂತದ ಗರ್ಭಪಾತ ಮಾಡಿಸುವುದನ್ನು ಗಂಭೀರ ಅಪರಾಧ ಎನ್ನಲಾಗಿದೆ. ಜಾತಿ ವ್ಯವಸ್ಥೆಯ ಸಂಕೋಲೆ ಮೀರಿ ವಿವಾಹವಾಗುವ ದಂಪತಿಗಳಿಗೆ ಈ ಕಾಯ್ದೆ ದೊಡ್ಡ ಮಟ್ಟದ ಮಾನಸಿಕ ಮತ್ತು ಕಾನೂನುಬದ್ಧ ರಕ್ಷಣೆ ನೀಡುತ್ತದೆ. ಸಮಾಜದಲ್ಲಿ ದಂಪತಿ ಅಥವಾ ಅವರ ಕುಟುಂಬದ ಬಗ್ಗೆ ಸುಳ್ಳು ಮಾಹಿತಿ ಹರಡುವುದಕ್ಕೆ ಬ್ರೇಕ್ ಬೀಳಲಿದೆ.
ಸಾಮಾಜಿಕ ಪರಿಣಾಮ ಬಗ್ಗೆಯೂ ಚಿಂತಿಸಿ
ಈ ಕಾಯ್ದೆ ಕೆಲವು ಅಂಶಗಳನ್ನು ಬದಲಾವಣೆ ಮಾಡುವುದು ಅತಿ ಅಗತ್ಯವಾಗಿದೆ. ಉದಾಹರಣೆಗೆ ಮಕ್ಕಳ ಅಂತರ್ಜಾತಿ ವಿವಾಹ ವಿರೋಧಿಸಿ ಸಾಂಕೇತಿಕವಾಗಿ ಶವಸಂಸ್ಕಾರ ಅಥವಾ ‘ತಿಥಿ’ ಮಾಡುವ ಪಾಲಕರಿಗೆ ಇನ್ನು ಮುಂದೆ ಜೈಲು ಶಿಕ್ಷೆಯಾಗಲಿದೆ. ತಿಥಿ ಮಾಡುವುದರಿಂದ ದಂಪತಿಗೆ ಯಾವುದೇ ತೊಂದರೆ ಇಲ್ಲ. ಆದರೆ ಹೀಗೆ ಮಾಡಿದ್ದಕ್ಕೆ ಜೈಲು ಶಿಕ್ಷೆಯಾದರೆ ತಂದೆ ತಾಯಿಯಿಂದ ಮಕ್ಕಳು ಶಾಶ್ವತವಾಗಿ ದೂರವಾಗಲಿದ್ದಾರೆ. ಅಪ್ಪ ಅಮ್ಮನನ್ನು ಸಣ್ಣ ಕಾರಣಕ್ಕೆ ಜೈಲಿಗೆ ತಳ್ಳಿದ ಮಗ ಅಥವಾ ಮಗಳು ಸಮಾಜದ ದೃಷ್ಟಿಯಲ್ಲಿ ವಿಲನ್ ಗಳಾಗುವ ಸಂಭವ ಇದೆ. ಇದನ್ನು ಸರ್ಕಾರ ಯೋಚಿಸಬೇಕು.
ಪಾಲಕರೊಂದಿಗೆ ಮಕ್ಕಳ ಅಂತರ ಹೆಚ್ಚಿಸಬೇಡಿ
ಕಾನೂನು ಕಟ್ಟುನಿಟ್ಟಾಗಿದ್ದಷ್ಟೂ ಪಾಲಕರು ಮತ್ತು ಮಕ್ಕಳ ನಡುವಿನ ಸಂವಹನ ಸಂಪೂರ್ಣ ಸ್ಥಗಿತಗೊಳ್ಳಬಹುದು. ಇದು ಸಾಮಾಜಿಕವಾಗಿ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದ್ದರೂ, ಕೌಟುಂಬಿಕ ಮಟ್ಟದಲ್ಲಿ ಶಾಶ್ವತ ಬಿರುಕು ಮೂಡಿಸುವ ಅಪಾಯವನ್ನೂ ಒಳಗೊಂಡಿದೆ. ಯಾವುದೇ ಕಠಿಣ ಕಾಯ್ದೆ ಬಂದಾಗ ಅದರ ದುರುಪಯೋಗವಾಗುವ ಸಾಧ್ಯತೆಯೂ ಇರುತ್ತದೆ. ಸಣ್ಣಪುಟ್ಟ ಕೌಟುಂಬಿಕ ಜಗಳಗಳು ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಡಬಹುದು. ಸಾಂಪ್ರದಾಯಿಕ ಮನೋಭಾವದ ಗ್ರಾಮೀಣ ಭಾಗಗಳಲ್ಲಿ ಈ ಕಾಯ್ದೆಯ ಜಾರಿ ಸವಾಲಾಗಬಹುದು ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು. ವಿಚ್ಛೇದನದ ನಂತರ ದಂಪತಿಗಳು ತಮ್ಮ ಕುಟುಂಬದ ಜೊತೆ ಮರುಸೇರ್ಪಡೆಯಾದಾಗ, ಈ ಹಿಂದೆ ದಾಖಲಾದ ದೂರುಗಳು ಅಥವಾ ‘ಗೌರವದ ಹತ್ಯೆ’ ತಡೆ ಕಾಯ್ದೆಯಡಿ ನಡೆಯುತ್ತಿರುವ ತನಿಖೆಗಳು ಕುಟುಂಬದಲ್ಲಿ ಹೊಸ ಕಾನೂನು ಸಂಕೀರ್ಣತೆಗಳನ್ನು ಸೃಷ್ಟಿಸಬಹುದು. ಹೀಗಾಗಿ ಮಕ್ಕಳನ್ನು ಪಾಲಕರಿಂದ ಶಾಶ್ವತವಾಗಿ ದೂರ ಮಾಡುವ ಬದಲು ಈ ಸಮಸ್ಯೆಯನ್ನು ಸರ್ಕಾರ ಜಾಗರೂಕತೆಯಿಂದ ನಿರ್ವಹಿಸುವ ಅಗತ್ಯವಿದೆ.
