ಉಡುಪಿ: ಡೀಸೆಲ್ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲುವಾಹನ (ಡೇ ಸರ್ವಿಸ್) ಬಸ್ಗಳ ಪ್ರಯಾಣ ದರವನ್ನು ಶೇ. 3 ರಿಂದ 8 ರವರೆಗೆ ಪರಿಷ್ಕರಿಸಿ ಜೂನ್ 9ರಿಂದ ಹೊಸ ದರವನ್ನು ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 5300 ಬಸ್ಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ 3 ರೂ. ಹಾಗೂ ಕೇಂದ್ರ ಸರ್ಕಾರ 4 ಬಾರಿ 8.17 ರೂಪಾಯಿ ಡಿಸೇಲ್ ದರ ಜಾಸ್ತಿ ಮಾಡಿದೆ. ವಾಹನದ ಬಿಡಿಭಾಗಗಳ ದರ, ಟೈರ್- ಟೈರ್ ರಿಸೋಲಿಂಗ್ ದರ, ಟೋಲ್ ದರ, ನೌಕರರ ವೇತನ, ಸರ್ಕಾರದ ತೆರಿಗೆ ಸಹಿತ ದೈನಂದಿನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ81ಟಿಡಿಒ2020ರ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4 ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್ ಹಾಕಲು ಅವಕಾಶವಿದ್ದು, ಹಾಲಿ ದರದ ಮೇಲೆ ಶೇ. 5 ರಿಂದ 8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ. ಪರಿಷತ ದರಗಳ ಅನ್ವಯ ಶಾಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಸಿಗುತ್ತಿದ್ದ ರಿಯಾಯಿತಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.
ಕೆನರಾ ಬಸ್ ಮಾಲೀಕರ ಸಂದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪಾಧ್ಯಕ್ಷ ಸದಾನಂದ ಛಾತ್ರ ಉಪಸ್ಥಿತರಿದ್ದರು.

