ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ ವಸ್ತುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಸ್ಮಾರ್ಟ್ ಕ್ವಿಕ್ ಇ–ಕಾಮರ್ಸ್ ಸಂಸ್ಥೆಯ ಗ್ರಾಹಕ ಸ್ನೇಹಿ ಬೃಹತ್ ಮಳಿಗೆ ನಿಯೋ ಫ್ರೆಶ್‌ನ 6ನೇ ಶಾಖೆ ಹೊಸೂರು ರಸ್ತೆಯ ಕೂಡ್ಲು ವಿಲೇಜ್‌ನಲ್ಲಿ ಶುಭಾರಂಭಗೊಂಡಿತು.
ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಮಹಾಸ್ವಾಮೀಜಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ, ಸ್ಮಾರ್ಟ್ ಕ್ವಿಕ್ ಸಂಸ್ಥೆಯ ಸಂಸ್ಥಾಪಕರಾದ ದೀಪುಗೌಡ, ಮತ್ತು ಸುಧೀಪ್ ಗೌಡ, ಶಿವು ಗೌಡ, ಉದಯ ಶೆಟ್ಟಿ, ಕಲ್ಯಾಣ್ ಪಾಟೀಲ್, ಸೇತುಕುಮಾರ್, ನವೀನ್, ಚಂದ್ರಶೇಖರ್ ಹಾಗೂ ಸುನೀಲಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನಂಜಾವಧೂತ ಮಹಾಸ್ವಾಮೀಜಿ, ಅಗತ್ಯ ವಸ್ತುಗಳ ಮಾರಾಟ ಕ್ಷೇತ್ರದಲ್ಲಿ ಕನ್ನಡಿಗ ಉದ್ಯಮಿ ದೀಪುಗೌಡ ಅವರು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವ ಅವರು ಮುಂದಿನ ದಿನಗಳಲ್ಲಿ ವೈದ್ಯಕೀಯ ಹಾಗೂ ಸಮಾಜಮುಖಿ ಸೇವಾ ಕ್ಷೇತ್ರಗಳಲ್ಲಿಯೂ ಹೆಜ್ಜೆ ಇಡಬೇಕು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕನ್ನಡಿಗ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ ಎಂದು ಹೇಳಿದರು.
ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಬೆಳೆಯುತ್ತಿರುವುದು ಸಂತಸದ ವಿಷಯ. ಉದ್ಯಮಶೀಲತೆ ಸಮಾಜದ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದರ ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೀಪುಗೌಡ ಅವರು ಅನೇಕ ಯುವಕರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಇಂತಹ ಕನ್ನಡಿಗ ಉದ್ಯಮಿಗಳ ಯಶಸ್ಸು ಮತ್ತಷ್ಟು ಯುವಕರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ದೀಪುಗೌಡ ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನ್ಯಾಯಸಮ್ಮತ ದರದಲ್ಲಿ ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ವರ್ಷಾಂತ್ಯದೊಳಗೆ ರಾಜ್ಯದ ವಿವಿಧ ಭಾಗಗಳಲ್ಲಿ 20 ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಸದ್ಯದಲ್ಲೇ ಇನ್ನೂ ಮೂರು ಸೂಪರ್ ಮಾರ್ಕೆಟ್‌ಗಳನ್ನು ಲೋಕಾರ್ಪಣೆ ಮಾಡಲಿದ್ದೇವೆ. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಜೊತೆಗೆ ಅತ್ಯುತ್ತಮ ಗ್ರಾಹಕ ಸೇವೆ ನೀಡುವತ್ತ ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ನೂತನ ನಿಯೋ ಫ್ರೆಶ್ ಮಳಿಗೆಯಲ್ಲಿ ದಿನಸಿ ಸಾಮಗ್ರಿಗಳು, ತಾಜಾ ಹಣ್ಣು–ತರಕಾರಿಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಹಕರ ದೈನಂದಿನ ಅಗತ್ಯಗಳಿಗೆ ಬೇಕಾದ ವಿವಿಧ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಗಣ್ಯರು, ಗ್ರಾಹಕರು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

