ಕಾರ್ಕಳ : ಉದಯ ಶೆಟ್ಟಿ ಮುನಿಯಾಲು ಅವರ ಪರಿಪೂರ್ಣ ಬದುಕು ಆದರ್ಶ ಪ್ರಾಯವಾದುದು. ಬಡವರ ಕಣ್ಮರೆಸುವ ಅವರ ಕಾರ್ಯ ಪ್ರಶಂಸನೀಯ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಅವರು ಉದಯ ಶೆಟ್ಟಿ ಮುನಿಯಾಲು ಅವರ ಹುಟ್ಟುಹಬ್ಬ ಪ್ರಯುಕ್ತ ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ ಮತ್ತು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಜೂ.7 ರಂದು ಬಂಡೀಮಠ ಮೂಡುಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬೃಹತ್ ಸೇವಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಜಗತ್ತು ಡಿಜಿಟಲ್‌ಮಯವಾಗಿದ್ದು ಯುವಜನತೆ ಯಾಂತ್ರಿಕ ಬದುಕಿಗೆ ಅಡಿಕ್ಟ್ ಆಗಿದ್ದಾರೆ. ಹೀಗಿರುವಾಗ ವಿದ್ಯಾರ್ಥಿಗಳ ಪ್ರತಿಭಾ ಪಲಾಯನ ತಪ್ಪಿಸಬೇಕು. ಯುವಜನತೆಯ ಸೃಜನಾತ್ಮಕ ಚಿಂತನೆಗೆ ನಮ್ಮ ಮಣ್ಣಿನಲ್ಲಿಯೇ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಅಭಿನಂದನಾರ್ಹ – ಮೌಲಾನಾ ಜಿ. ಅಬ್ದುಲ್ ಹಫೀಸ್
ಮೌಲಾನಾ ಜಿ. ಅಬ್ದುಲ್ ಹಫೀಸ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಅನುಸರಣೆಯಿಂದಾಗಿ ಇಂದು ಮಾನವ ನಡುವಿನ ಪ್ರೀತಿ ನಶಿಸುತ್ತದೆ. ಆದರೆ, ನಮ್ಮ ಕನ್ನಡ ಭಾಷೆಯ ಮೇಲೆ ಅಭಿಮಾನ ಬೆಳೆಸಿದಾಗ ನಮ್ಮತನ ಉಳಿಯಲು ಸಾದ್ಯ ಈ ನಿಟ್ಟಿನಲ್ಲಿ ವಿಶೇಷ ವ್ಯಕ್ತಿತ್ವವುಳ್ಳ ಭವಿಷ್ಯ ರಾಜಕೀಯದ ವಿಶೇಷ ಚಿಂತನೆಯುಳ್ಳ ಉದಯ್ ಶೆಟ್ಟಿಯವರು ನೂರಾರು ಸರಕಾರಿ ಶಾಲೆಗಳನ್ನು ಗುರುತಿಸಿ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಸಮಾಜ ಸೇವೆ ನಿರಂತರವಾಗಿರಲಿ – ವಂ. ಅಲ್ಟನ್ ಡಿಸೋಜಾ
ಅತ್ತೂರು ಬಸಿಲಿಕಾದ ವಂ. ಅಲ್ಟನ್ ಡಿಸೋಜಾ ಮಾತನಾಡಿ, ತಮ್ಮ 52 ವರ್ಷಗಳ ಪಯಣದಲ್ಲಿ ಉದಯ್ ಶೆಟ್ಟಿಯವರು ಮನುಷ್ಯತ್ವ ಏನು ಎಂಬುದನ್ನು ತೋರಿಸಿಕೊಡುವುದರ ಜೊತೆಗೆ ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮತ್ತಿತರ ಸೇವಾ ಕಾರ್ಯಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇವರಿಂದ ಮುಂದೆಯೂ ನಿರಂತರವಾಗಲಿ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಮಾನವವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಾಯಕ ಉದಯ ಕುಮಾರ್ ಶೆಟ್ಟಿಯವರ ಕಾರ್ಯವೈಖರಿ ಮತ್ತು ಈ ದಿನದ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇವರು ಹಣ ಎಲ್ಲರಿಗೂ ನೀಡುತ್ತಾನೆ, ಅದನ್ನು ಸಮಾಜಕ್ಕೆ ವಿನಿಯೋಗಿಸುವ ಗುಣ ಎಲ್ಲರಲ್ಲಿ ಇರುವುದಿಲ್ಲ. ಆದರೆ ಉದಯ್ ಶೆಟ್ಟಿಯವರು ಯಾವುದೇ ಪಕ್ಷ ಭೇದವಿಲ್ಲದೆ ಸಮಾಜ ಸೇವೆ ಮಾಡುತ್ತಿರುವುದು ಮಾದರಿದಾಯಕ ಎಂದು ಹರ್ಷ ವ್ಯಕ್ತಪಡಿಸಿದರು.
ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ ಮಾತಾನಾಡಿ, ಸಹೃದಯಿ ವ್ಯಕ್ತಿತ್ವದೊಂದಿಗೆ ಸಾಮಾಜಿಕವಗಿ, ರಾಜಕೀಯವಾಗಿ ಉದಯ ಕುಮಾರ್ ಶೆಟ್ಟಿಯವರು ಜನಮೆಚ್ಚಿನ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವುದು ಸಂತಸದಾಯಕ ಎಂದು ಹೇಳಿದರು.
ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಪದಾಧಿಕಾರಿ ಲಕ್ಷ್ಮೀಶ್ ಗಬ್ಬಲಡ್ಕ ಮಾತಾನಾಡಿ, ವಾತ್ಸಲ್ಯಮಯಿಯಾಗಿ, ಧಾರ್ಮಿಕ ಮುಂದಾಳುವಾಗಿ, ಸಾಮಾಜಿಕ ಚಿಂತಕನಾಗಿ ಗುರುತಿಸುಕೊಂಡಿರುವ ಭರವಸೆಯ ನಾಯಕ ಉದಯ್ ಶೆಟ್ಟಿಯವರಿಂದ ಮತ್ತಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ಮಾಡುವಂತಾಗಲಿ ಎಂದರು.
ಅಭಿನಂದನೆ – ಸನ್ಮಾನ
2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸೆಲ್ಸಿಯಲ್ಲಿ 100 ಶೇ. ಫಲಿತಾಂಶ ಪಡೆದ ಒಟ್ಟು 27 ಸರಕಾರಿ ಶಾಲೆಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಇದೇ ಸಂದರ್ಭ ಶೇ. 90 ಕ್ಕಿಂತ ಅಧಿಕ ಅಂಕ ಗಳಿಸಿದ ತಾಲೂಕಿನ ಸುಮಾರು 30 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಗ್ನಿವೀರ್ ಆಗಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಳೆಂಜೆಯ ಅನಂತ್ ನಾಯ್ಕ ಅವರನ್ನು ಅಭಿನಂದಿಸಲಾಯಿತು.
ಆರೋಗ್ಯ ವಿಮೆ ಕಾರ್ಡ್ ವಿತರಣೆ
ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಕುಟುಂಬ ಸೇರಿದಂತೆ ಒಟ್ಟು 630 ಮಂದಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಲಾಯಿತು.
ರಕ್ತದಾನ – ಆರೋಗ್ಯ ತಪಾಸಣಾ ಶಿಬಿರ
ರೋಟರಿ ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 86 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಆರೋಗ್ಯ ತಪಾಸಣೆ ಹಾಗೂ ಆಳ್ವಾಸ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಸ್ತ್ರೀ ರೋಗ ತಪಾಸಣೆಯಲ್ಲಿ ತಾಲೂಕಿನ ವಿವಿಧ ಭಾಗದ ಜನತೆ ಪಾಲ್ಗೊಂಡರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಸುರೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಹರಿಪ್ರಸಾದ್ ರೈ, ರಮೇಶ್ ಕಾಂಚನ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಸಾರ್ಥಕ್ಯ – ಉದಯ ಶೆಟ್ಟಿ ಮುನಿಯಾಲು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ನಾವು ಗಳಿಸಿದ ಆದಾಯವನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಆಗುವಂತಹ ಖುಷಿಗಿಂತ ಬೇರೊಂದಿಲ್ಲ. ಅಲ್ಲದೆ ಎಲ್ಲರೂ ಜೊತೆಯಾಗಿ ಒಳ್ಳೆಯ ಮನಸ್ಸಿನಿಂದ ಮಾಡುವ ಸಮಾಜ ಸೇವೆ ಸಾರ್ಥಕ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಆಡಂಬರವಿಲ್ಲದೆ ಇಂದು ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದ ಅವರು ಡಾ. ವೀರಪ್ಪ ಮೊಯ್ಲಿ ಗೋಪಾಲ ಭಂಡಾರಿ ಸೇರಿದಂತೆ ಹಿರಿಯ ನಾಯಕರ ಆಡಳಿತ, ಕಾರ್ಯವೈಖರಿಯನ್ನು ಮಾದರಿಯಾಗಿಟ್ಟುಕೊಂಡು ಮುಂದೆಯೂ ನಾವೆಲ್ಲರೂ ಜೊತೆಯಾಗಿ ಸಮಾಜಮುಖಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಪುಣೆ ಉದ್ಯಮಿ ಪ್ರಕಾಶ್ ಶೆಟ್ಟಿ, ವೆಂಕಟರಮಣ ದೇವಸ್ಥಾನದ ಅರ್ಚಕ ಗಣೇಶ್ ಭಟ್, ಕಾರ್ಕಳ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಹೆಬ್ರಿಯ ಅಧ್ಯಕ್ಷ ಶಂಕರ್, ಎಸ್.ಸಿ. ಘಟಕದ ಅಧ್ಯಕ್ಷ ದೇವದಾಸ್, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ಹೆಬ್ರಿಯ ಸುಮಾ, ಉದಯ್ ಕುಮಾರ್ ಶೆಟ್ಟಿಯವರ ಪತ್ನಿ ನಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಯಶೋಧ ಶೆಟ್ಟಿ ಅಜೆಕಾರು ಪ್ರಾರ್ಥಿಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ವಂದಿಸಿದರು.

