ಬ್ರಹ್ಮಾವರ : ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ಧರೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಗುರುವಾರ ನಡೆದಿದೆ.

ಆನೆಕಾಲು ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರು, ಉಪ್ಪೂರು ರಾಮಕ್ಷತ್ರಿಯ ಸಂಘದ ಸಭಾಭವನದ ಸಮೀಪ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಕ್ಷಣ ನೆರವಿಗೆ ಧಾವಿಸಿ ವೃದ್ಧರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಆಸ್ಪತ್ರೆಯ ದಾಖಲಾತಿ ಪ್ರಕ್ರಿಯೆ ವೇಳೆ ವೃದ್ಧರು ತಮ್ಮ ಹೆಸರು ಗೋಪಾಲ ಶ್ಯಾಮರಾಯ ಪೂಜಾರಿ (72) ಎಂದು ತಿಳಿಸಿದ್ದು, ತಾವು ಉಡುಪಿಯ ಗುಂಡಿಬೈಲಿನ ನಿವಾಸಿ ಎಂದು ಹೇಳಿದ್ದಾರೆ. ಮನನೊಂದು ಮನೆಯವರ ಸಂಪರ್ಕವಿಲ್ಲದೆ ಜೀವನ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.
ವೃದ್ಧರ ವಾರಸುದಾರರು ಅಥವಾ ಕುಟುಂಬಸ್ಥರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ವೃದ್ಧರ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ನೆರವು ನೀಡುವಂತೆ ಮನವಿ ಮಾಡಲಾಗಿದೆ.

