ಮದುವೆ ಆಮಿಷ ಒಡ್ಡಿ 42.97 ಲಕ್ಷ ರೂ. ಸುಲಿಗೆ : ಬೆಂಗಳೂರಿನಲ್ಲಿ ಶಿಕ್ಷಕಿ ಸೇರಿ ಇಬ್ಬರ ಬಂಧನ

0
101

ಉಡುಪಿ : ಮದುವೆ ಮೆಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾಗಿ, ಸುಳ್ಳು ದೂರು ನೀಡುವುದಾಗಿ ಬೆದರಿಸಿ ಉಡುಪಿಯ ಯುವಕನೊಬ್ಬನಿಂದ ಬರೋಬ್ಬರಿ 42.97 ಲಕ್ಷ ರೂ. ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಶಿಕ್ಷಕಿ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಬೈಂದೂರು ಮೂಲದ ಪ್ರಸ್ತುತ ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ ನಾಗರತ್ನ ಹೆಚ್ (42) ಹಾಗೂ ಕಾರ್ಕಳ ತಾಲೂಕು ಮಿರ್ಯಾರು ಮೂಲದ ಹೇಮಂತ (41) ಎಂದು ಗುರುತಿಸಲಾಗಿದೆ.

ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಕೆ. ಎಂಬುವರು ತಮಗೆ ಸೂಕ್ತ ವಧುವಿಗಾಗಿ ಹುಡುಕುತ್ತಿದ್ದಾಗ ‘ಕನ್ನಡ ಜೋಡಿ ಮೆಟ್ರೋಮೊನಿ’ ಆ್ಯಪ್‌ ಮೂಲಕ ಬೆಂಗಳೂರಿನ ಬಸವೇಶ್ವರ ನಗರದ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ನಾಗರತ್ನ ಪರಿಚಯವಾಗಿದ್ದಳು. ಆಕೆ ಮದುವೆಯ ಪ್ರಸ್ತಾಪವಿಟ್ಟಾಗ, ಪ್ರದೀಪ್‌ ಅವರು ತಮ್ಮದೇ ಜಾತೀಯ ಹೆಣ್ಣನ್ನು ಮದುವೆಯಾಗುವುದಾಗಿ ಹೇಳಿ ಆಕೆಯ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆದರೂ ಬಿಡದ ನಾಗರತ್ನ, ಪ್ರದೀಪ್ ಅವರಿಗೆ ಕರೆ ಹಾಗೂ ಮೆಸೇಜ್‌ಗಳನ್ನು ಮಾಡಿ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಆರಂಭಿಸಿದ್ದಳು. ತದನಂತರ ಹಂತ ಹಂತವಾಗಿ ತನ್ನ ಖಾತೆ, ತನ್ನ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಹಾಗೂ ಅಕ್ಕ ರೇಣುಕಾ ಎಂಬುವವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಳ್ಳಲು ಶುರು ಮಾಡಿದ್ದಳು. ಜನವರಿ 2024 ರಿಂದ ಜನವರಿ 2026ರ ಅವಧಿಯಲ್ಲಿ ಬೆದರಿಕೆ ಒಡ್ಡಿ ಪ್ರದೀಪ್‌ ಅವರಿಂದ ಹಂತ ಹಂತವಾಗಿ ಒಟ್ಟು ₹42,97,350 ರೂಪಾಯಿಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಳು.

ಮಾನ ಹರಾಜು, ಆತ್ಮಹತ್ಯೆ ಬೆದರಿಕೆ

ಬಳಿಕ ಪ್ರದೀಪ್ ನೀಡಿದ ಹಣವನ್ನು ವಾಪಸ್ ಕೇಳಿದಾಗ, “ನನ್ನ ಹಾಗೂ ನಿನ್ನ ನಡುವೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಕೇಸ್ ಹಾಕುತ್ತೇನೆ. ನೀನು ಕೆಲಸ ಮಾಡುವ ಉಡುಪಿಯ ಕಚೇರಿಗೆ ಬಂದು ಸಿಬ್ಬಂದಿ ಹಾಗೂ ಗ್ರಾಹಕರ ಎದುರು ನಿನ್ನ ಮಾನ ಹರಾಜು ಹಾಕುತ್ತೇನೆ. ಸಂಸ್ಥೆಯ ಹಣವನ್ನು ನೀನು ದುರುಪಯೋಗ ಮಾಡಿಕೊಂಡಿದ್ದೀಯ ಎಂದು ಹೇಳಿ ಸಂಸ್ಥೆಯ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಪ್ರದೀಪ್‌ ಅವರಿಗೆ ಬೆದರಿಕೆ ಒಡ್ಡಿದ್ದಳು.

ಬಲವಂತವಾಗಿ ಸಂಘಟಿತರಾಗಿ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪಿಗಳಾದ ನಾಗರತ್ನ ಹೆಚ್, ಹೇಮಂತ್ ಕರ್ಕೇರಾ, ಪ್ರಮೋದ್ ಹಾಗೂ ರೇಣುಕಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಪ್ರದೀಪ್ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ಮತ್ತು ಬಂಧನ

ಆರೋಪಿಗಳ ಪತ್ತೆಗೆ ವಿಶೇಷ ತಂಡವು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಬಸವೇಶ್ವರ ನಗರದಲ್ಲಿ ದಾಳಿ ನಡೆಸಿ ಆರೋಪಿಗಳಾದ ನಾಗರತ್ನ ಹೆಚ್ ಹಾಗೂ ಹೇಮಂತ ಅವರನ್ನು ವಶಕ್ಕೆ ಪಡೆದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.