ಕರಾವಳಿ ಯುವಕರಿಂದ ಭಕ್ತಿ ಹಾಗೂ ಸ್ವಚ್ಛತೆಯ ಪವಿತ್ರ ಪಯಣ

–ಮಂದಾರ ರಾಜೇಶ್
ತುಳುನಾಡು ಬಸ್ರೂರು:- ಭಕ್ತಿ ಎನ್ನುವುದು ಪ್ರಕೃತಿಯ ಆರಾಧನೆ ಮತ್ತು ಸತ್ಕರ್ಮಗಳ ಮೂಲಕವೂ ಸಾಕಾರಗೊಳ್ಳುತ್ತದೆ ಎಂಬುದನ್ನು ತಿಳಿಸಲು ಕರಾವಳಿಯ ಯುವಶಕ್ತಿ ಸಜ್ಜಾಗಿದೆ.
ಶಿವನ ಪವಿತ್ರ ಸ್ಮರಣೆ, ಧರ್ಮದ ಶ್ರೇಷ್ಠತೆ ಹಾಗೂ ತುಳುನಾಡಿನ ಆಧ್ಯಾತ್ಮಿಕ ಪರಂಪರೆಯನ್ನು ದೇಶದ ಮೂಲೆ ಮೂಲೆಗೂ ಪಸರಿಸುವ ಉದಾತ್ತ ಉದ್ದೇಶದೊಂದಿಗೆ, ಮಂಗಳೂರಿನ ನಾಲ್ವರು ಉತ್ಸಾಹಿ ಯುವಕರು ಬಸ್ರೂರಿನ ಐತಿಹಾಸಿಕ ಶ್ರೀ ತುಳುವೇಶ್ವರ ದೇವಸ್ಥಾನದಿಂದ ಪವಿತ್ರ ‘ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಹಾಯಾತ್ರೆ’ಗೆ ಚಾಲನೆ ನೀಡಲಿದ್ದಾರೆ.
ಮಂಗಳೂರಿನ ಯುವ ಶಕ್ತಿಯ ಪ್ರತೀಕಗಳಾದ ನಿತಿನ್,ರಿತೇಶ್, ಅಜಯ್ ಹಾಗೂ ಬಸಂತ್ ಕುಮಾರ್ ಈ ಸುದೀರ್ಘ ಆಧ್ಯಾತ್ಮಿಕ ಪಯಣದ ಸಾಧನೆ ಮಾಡಲಿದ್ದಾರೆ.

ಜುಲೈ 19ರಂದು ಬೆಳಿಗ್ಗೆ 10:30 ಗಂಟೆಗೆ ಶ್ರೀ ತುಳುವೇಶ್ವರ ಸನ್ನಿಧಿಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಕೃಪೆಯನ್ನು ಪ್ರಾರ್ಥಿಸಿ, ಸುಮಾರು 45 ರಿಂದ 50 ದಿನಗಳ ಕಾಲ ನಡೆಯಲಿರುವ ಈ ಅಪೂರ್ವ ಮಹಾಯಾತ್ರೆಯನ್ನು ಆರಂಭಿಸಲಿದ್ದಾರೆ.
ಸಂಸ್ಕೃತಿ ಮತ್ತು ಜ್ಞಾನದ ಅನುಸಂಧಾನ
ಈ ಯಾತ್ರೆಯು ಕೇವಲ ದರ್ಶನ ಭಾಗ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ವಿವಿಧ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿ, ಭಾಷೆಗಳು, ಪವಿತ್ರ ಶಿವಕ್ಷೇತ್ರಗಳು, ದ್ವಾದಶ ಜ್ಯೋತಿರ್ಲಿಂಗಗಳು ಹಾಗೂ ಪವಿತ್ರ ನದಿಗಳ ದಿವ್ಯ ಇತಿಹಾಸವನ್ನು ದಾಖಲಿಸಿ, ಮುಂದಿನ ತಲೆಮಾರಿನ ಭಕ್ತರಿಗೆ ಉಪಯುಕ್ತವಾಗುವಂತಹ ಸಮಗ್ರ ಟ್ರಾವೆಲ್ ಗೈಡ್ ವಿಡಿಯೋಗಳನ್ನು ಈ ಯುವಕರು ಸಿದ್ಧಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಜೊತೆಗೆ ಬಸ್ರೂರಿನ ಶ್ರೀ ತುಳುವೇಶ್ವರ–ತುಳುವೇಶ್ವರಿ ಸಾನ್ನಿಧ್ಯದ ಮಹಿಮೆಯನ್ನು ಇಡೀ ದೇಶಕ್ಕೆ ಪರಿಚಯಿಸುವುದು ಇವರ ಸಂಕಲ್ಪವಾಗಿದೆ.
ಭಕ್ತಿಯೊಂದಿಗೆ ಬೆರೆತ ಪರಿಸರ ಕಾಳಜಿ
ಮಹಾಯಾತ್ರೆಯ ಅತ್ಯಂತ ಸುಂದರವಾದ ಭಾಗವೆಂದರೆ ಅದು ಶೂನ್ಯ ತ್ಯಾಜ್ಯ (Zero Waste) ಪರಿಕಲ್ಪನೆ.
ತೀರ್ಥಕ್ಷೇತ್ರಗಳ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಧರ್ಮದ ಉನ್ನತ ಜೀವನ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುತ್ತಾ ಸಾಗುವ ಈ ಯುವಕರ ನಡೆ, ದೇವನ ಆರಾಧನೆಯೊಂದಿಗೆ ಪ್ರಕೃತಿಯ ಆರಾಧನೆಯನ್ನೂ ಜೋಡಿಸಿದ ಅಪೂರ್ವ ಕಾಯಕವಾಗಿದೆ.
”ಪರಿಸರವೇ ದೇವರಿರುವ ಪರಮ ಸನ್ನಿಧಿ. ದೇವಸ್ಥಾನಗಳನ್ನು ಮತ್ತು ಧರ್ಮವನ್ನು ಪ್ರೀತಿಸುವ ನಾವು, ದೇವರ ಸೃಷ್ಟಿಯಾದ ಈ ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ನಿಜವಾದ ಶಿವಪೂಜೆ. ಯುವ ಜನತೆ ತಮ್ಮ ಭಕ್ತಿ ಮತ್ತು ಶಕ್ತಿಯನ್ನು ಸಮಾಜದ ಹಿತಕ್ಕಾಗಿ ಹಾಗೂ ಪ್ರಕೃತಿಯ ರಕ್ಷಣೆಗಾಗಿ ಬಳಸಿದಾಗ ದೇಶವೇ ಸುಂದರ ತೀರ್ಥಕ್ಷೇತ್ರವಾಗುತ್ತದೆ. ಈ ಯುವಕರ ಪವಿತ್ರ ಪಯಣ ನಮ್ಮೆಲ್ಲರ ಮನಸ್ಸಿನಲ್ಲಿ ಧರ್ಮ ಮತ್ತು ಪರಿಸರ ಕಾಳಜಿಯ ಹೊಸ ಬೆಳಕನ್ನು ಮೂಡಿಸಲಿ.”
ಮಹಾಯಾತ್ರೆ ಸಂಪೂರ್ಣ ಯಶಸ್ವಿಯಾಗಲಿ!
ಓಂ ನಮಃ ಶಿವಾಯ! ಹರ ಹರ ಮಹಾದೇವ!

