ಹಳಗನ್ನಡದ ಓದಿನಿಂದ ಪರಂಪರೆಯ ಪ್ರಜ್ಞೆ

0
159


ಉಡುಪಿ: ಹಳಗನ್ನಡದ ಓದು ಪರಂಪರೆ ಮುಂದುವರಿಸಲು ಹಾಗೂ ಸಮಕಾಲಿನ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಲು ಅಗತ್ಯವಾಗಿದೆ. ಹಳಗನ್ನಡದ ಓದಿನಿಂದ ಪರಂಪರೆಯ ಪ್ರಜ್ಞೆಯನ್ನು ಪಡೆಯಲು ಸಾಧ್ಯ ಎಂದು ಹಿರಿಯ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಥ ಬೀದಿ ಗೆಳೆಯರು ಸಂಸ್ಥೆ ಆಶ್ರಯದಲ್ಲಿ ಕನ್ನಡ ಎಂ ಎ ವಿದ್ಯಾರ್ಥಿಗಳು ಮತ್ತು ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಿಗಾಗಿ ನಡೆದ ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಸಮಕಾಲಿನ ಸಂದರ್ಭಕ್ಕೆ ಬೇಕಾಗಿರುವ ಅನೇಕ ಮೌಲ್ಯಯುತವಾದ, ಪ್ರಜಾಸತ್ತಾತ್ಮಕವಾದ ಆಶಯಗಳನ್ನು ಹಳಗನ್ನಡದ ಕಾವ್ಯಗಳಿಂದ ಪಡೆಯಲು ಸಾಧ್ಯ. ಹಾಗಾಗಿ ಹಳಗನ್ನಡದ ಓದು ಏನೆಲ್ಲ ಕಲಿಸಬಹುದು ಎನ್ನುವುದು ಮುಖ್ಯ. ಸಮಕಾಲಿನ ಸಂದರ್ಭಕ್ಕೆ ಹಳಗನ್ನಡ ತಂದು ಮತ್ತೆ ಹೊಸತನ್ನಾಗಿ ಮಾಡುವ ಪ್ರಕ್ರಿಯೆ ಮುಖ್ಯ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್​.ಎನ್​ ಮುಕುಂದರಾಜ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ ಬರೆದ ಕಾವ್ಯಗಳನ್ನು ಓದಿದರೆ ದಮನಿತ ಸಮಾಜದ ಯಾತನೆಗೆ ಉತ್ತರ ಸಿಗುತ್ತದೆ. ದೇಶದ ಶೇ. 97ರಷ್ಟು ಮಂದಿ ವಿದ್ಯೆ ಪಡೆಯದೇ ಇರುವುದು ನಮ್ಮ ಮೇಲೆ ಪರಕೀಯರ ದಾಳಿಯಾಗಲು ಮೂಲ ಕಾರಣ. ಈ ದೇಶದಲ್ಲಿ ಸಂವಿಧಾನ ಬಂದ ನಂತರದಲ್ಲಿ ಎಲ್ಲರಿಗೂ ವಿದ್ಯಾಭ್ಯಾಸದ ಲಾಭ ದೊರೆತಿರುವುದು ಸಂತಸದಾಯಕ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ. ಜಯಪ್ರಕಾಶ್​ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಸ.ಪ್ರ.ದ. ಕಾಲೇಜು ಹೊಸಕೋಟೆಯ ಪ್ರಾಂಶುಪಾಲ ಪ್ರೊ. ರಾಮಲಿಂಗಪ್ಪ ಟಿ. ಬೇಗೂರು, ಮಂಗಳ ಗಂಗೋತ್ರಿ ಎಸ್​ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯಕುಮಾರ್​ ಶೆಟ್ಟಿ ಕಾಳಾವರ, ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್​ ಕುಮಾರ್​, ರಮೇಶ್​ ನಾಯಕ್​ ಉಪಸ್ಥಿತರಿದ್ದರು. ಸಂಸ್ಥೆಯ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಲತಾ ಪಿ. ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕ ನಂದೀಶ್​ ಕುಮಾರ್​ ಸ್ವಾಗತಿಸಿ, ಐ.ಕ್ಯೂ. ಎ. ಸಿ. ಸಂಚಾಲಕ ಡಾ. ಲಿತಿನ್​ ಬಿ.ಎಂ ವಂದಿಸಿದರು.

LEAVE A REPLY

Please enter your comment!
Please enter your name here