ನವದೆಹಲಿ : ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ನಡೆಸುವಂತೆ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಮಹತ್ವದ ಆದೇಶ ಹೊರಡಿಸಿದೆ. ಈ ಪರೀಕ್ಷಾ ಪ್ರಕ್ರಿಯೆಯನ್ನು 2027ರ ಜುಲೈ ವೇಳೆಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೈಲಟ್‌ಗಳ ಮಾದಕ ದ್ರವ್ಯ ಪರೀಕ್ಷೆಗೆ ಸಂಬಂಧಿಸಿದ ಹೊಸ ನಿಯಮಗಳ ಕರಡನ್ನು ಈ ತಿಂಗಳ ಅಂತ್ಯದೊಳಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಗುರುವಾರ ತಿಳಿಸಿದ್ದಾರೆ.
ಇತ್ತೀಚೆಗೆ ಫುಕೆಟ್–ದೆಹಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಹಠಾತ್ತನೆ ಸುಮಾರು 300 ಅಡಿ ಕೆಳಕ್ಕೆ ಕುಸಿದ ಘಟನೆ ನಡೆದಿತ್ತು. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಬಳಿಕ ವಿಮಾನದ ಮುಖ್ಯ ಪೈಲಟ್‌ಗೆ ನಡೆಸಲಾದ ಮಾದಕ ದ್ರವ್ಯ ಪರೀಕ್ಷೆಯಲ್ಲಿ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿರುವುದು ಬೆಳಕಿಗೆ ಬಂದಿತ್ತು.
ಈ ಘಟನೆ ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ, ವಿಮಾನ ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ಗಳ ಮಾದಕ ದ್ರವ್ಯ ಸೇವನೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ವಿಮಾನ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
ಫುಕೆಟ್ ವಿಮಾನ ಘಟನೆ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ ಎಎಐಬಿ ನಡೆಸಿದ ಪ್ರಾಥಮಿಕ ತನಿಖಾ ವರದಿಯಲ್ಲೂ ಪೈಲಟ್ ಮಾದಕ ದ್ರವ್ಯ ಸೇವಿಸಿರುವುದು ಗಂಭೀರ ವಿಚಾರ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಇದರ ಬೆನ್ನಲ್ಲೇ ಸೆಪ್ಟೆಂಬರ್ 4ರಂದು ಏರ್ ಇಂಡಿಯಾ ಸಂಸ್ಥೆ ಸಂಬಂಧಪಟ್ಟ ಪೈಲಟ್‌ನ ಸೇವೆಯನ್ನು ವಜಾಗೊಳಿಸಿತ್ತು. ಇದೀಗ ದೇಶದ ಎಲ್ಲ ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳಿಗೂ ಮಾದಕ ದ್ರವ್ಯ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದ್ದು, ವಿಮಾನ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಕ್ರಮವಾಗಿ ಇದನ್ನು ಪರಿಗಣಿಸಲಾಗಿದೆ.

