ಭಟ್ಕಳ : 2026–27ನೇ ಶೈಕ್ಷಣಿಕ ವರ್ಷದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಶಿರಾಲಿಯ ಶ್ರೀ ಚಿತ್ರಾಪುರ ಮಠದ ಸ್ವಾಯತ್ತತೆಗೆ ಒಳಪಟ್ಟಿರುವ ಶ್ರೀವಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸೆ.25ರಂದು ನಡೆದ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿ ಕಿಶನ್ ಮಂಜುನಾಥ ನಾಯ್ಕ ಅವರು 100 ಮೀಟರ್ ಓಟ ಹಾಗೂ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಚರಣ ಲೋಕೇಶ ದೇವಾಡಿಗ ಅವರು 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ.
800 ಮೀಟರ್ ಓಟದ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕರುಣ ದೇವೇಂದ್ರ ನಾಯ್ಕ ಅವರು ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಶ್ರೀವಲಿ ಪದವಿ ಪೂರ್ವ ಕಾಲೇಜು 2025ರಲ್ಲಿ ಆರಂಭಗೊಂಡಿದ್ದು, ತನ್ನ ಎರಡನೇ ಶೈಕ್ಷಣಿಕ ವರ್ಷದಲ್ಲಿಯೇ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಕಾಲೇಜಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಕಾಲೇಜು ನೀಡುತ್ತಿರುವ ಪ್ರೋತ್ಸಾಹ ಮತ್ತು ತರಬೇತಿಗೆ ಸಾಕ್ಷಿಯಾಗಿದೆ.
ಸಾಧನೆಗೈದ ವಿದ್ಯಾರ್ಥಿಗಳಾದ ಕಿಶನ್ ಮಂಜುನಾಥ ನಾಯ್ಕ, ಚರಣ ಲೋಕೇಶ ದೇವಾಡಿಗ ಹಾಗೂ ಕರುಣ ದೇವೇಂದ್ರ ನಾಯ್ಕ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉತ್ತರ ಕನ್ನಡ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತರಬೇತಿ ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಮುಖ್ಯ ತರಬೇತುದಾರರಾದ ಕುಲದೀಪ್ ನಾಯ್ಕ ಅವರಿಗೂ ಅಭಿನಂದನೆ ಸಲ್ಲಿಸಲಾಗಿದೆ. ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಲಾಗಿದೆ.

