ಮಂಗಳೂರು : ನಗರದ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಔಷಧಗಳ ಸುರಕ್ಷಿತ ಬಳಕೆ, ಸರಿಯಾದ ವಿತರಣೆ ಹಾಗೂ ರೋಗಿಗಳ ಚಿಕಿತ್ಸೆಯಲ್ಲಿ ಫಾರ್ಮಸಿಸ್ಟ್‌ಗಳ ಮಹತ್ವದ ಪಾತ್ರವನ್ನು ಕಾರ್ಯಕ್ರಮದಲ್ಲಿ ಒತ್ತಿಹೇಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಸಿಎಸ್ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಹಾಗೂ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಸೊರಕೆ ಅವರು, ರೋಗಿಗಳಿಗೆ ಸೂಕ್ತ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ತಲುಪಿಸುವಲ್ಲಿ ಫಾರ್ಮಸಿಸ್ಟ್‌ಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
ವೈದ್ಯರು ನೀಡುವ ಔಷಧ ಚೀಟಿಯನ್ನು (ಪ್ರಿಸ್ಕ್ರಿಪ್ಷನ್) ಸೂಕ್ತವಾಗಿ ಗಮನಿಸಿ ಪರಿಶೀಲಿಸುವ ಅಗತ್ಯವನ್ನೂ ಅವರು ವಿವರಿಸಿದರು. ಔಷಧಗಳ ಬಳಕೆಯಲ್ಲಿ ಯಾವುದೇ ಗೊಂದಲ ಅಥವಾ ತಪ್ಪು ಸಂಭವಿಸದಂತೆ ಫಾರ್ಮಸಿಸ್ಟ್‌ಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಆಸ್ಪತ್ರೆಯ ಆಡಳಿತ ಮಂಡಳಿಯ ಅನುಮತಿಯೊಂದಿಗೆ ಫಾರ್ಮಸಿ ಡಿಸ್ಕೌಂಟ್ ಕಾರ್ಡ್ ಮೂಲಕ ಅರ್ಹರಿಗೆ ರಿಯಾಯಿತಿ ದರದಲ್ಲಿ ಔಷಧಗಳನ್ನು ಒದಗಿಸುತ್ತಿರುವ ಕ್ರಮವನ್ನು ಅವರು ಶ್ಲಾಘಿಸಿದರು. ಇದರಿಂದ ಅಗತ್ಯವಿರುವ ರೋಗಿಗಳಿಗೆ ಔಷಧ ವೆಚ್ಚದಲ್ಲಿ ಸ್ವಲ್ಪಮಟ್ಟಿನ ಪರಿಹಾರ ದೊರೆಯುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಡಾ. ಜೀವ ರಾಜ್ ಸೊರಕೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸ್ಪತ್ರೆಯ ಆಡಳಿತಾಧಿಕಾರಿ ರಮಾ ಸೊರಕೆ, ವೈದ್ಯಕೀಯ ಅಧೀಕ್ಷಕಿ ಡಾ. ಶಾಲಿನಿ ರಾವ್, ನರ್ಸಿಂಗ್ ಅಧೀಕ್ಷಕಿ ಗ್ರೇಸಿ ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿರಿಯ ಫಾರ್ಮಸಿಸ್ಟ್ ಎಲ್.ಎನ್. ಭಟ್ ಮಳಿ ಅವರು ಪ್ರಸ್ತಾವನೆ ಸಲ್ಲಿಸಿದರು. ಫಾರ್ಮಸಿ ತಂಡದ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಹಿರಿಯ ಫಾರ್ಮಸಿಸ್ಟ್ ನಿತೀಶ್ ಕಾರ್ಯಕ್ರಮವನ್ನು ಸಂಯೋಜಿಸಿದರು.
ಕಾರ್ಯಕ್ರಮದ ಅಂಗವಾಗಿ ಫಾರ್ಮಸಿಸ್ಟ್‌ಗಳ ಸೇವೆಯನ್ನು ಸ್ಮರಿಸಿ, ಆಡಳಿತ ಮಂಡಳಿಯವರು ಎಲ್ಲ ಫಾರ್ಮಸಿಸ್ಟ್‌ಗಳಿಗೆ ಶುಭ ಹಾರೈಸಿದರು.
