ಉಡುಪಿ : ವಡಾರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಾವಡಿ ಎಂಬ ಗ್ರಾಮದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮಲ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ನಡೆಯುತ್ತಿರುವ ಸನ್ನಾಹಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾವಡಿ ಒಂದು ಸಂಪೂರ್ಣ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ರೈತಾಪಿ ಕುಟುಂಬಗಳು, ಬಡ ಜನರು ಹಾಗೂ ದಿನಗೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಪಟ್ಟಣದ ತ್ಯಾಜ್ಯವನ್ನು ತಂದು ವಿಲೇವಾರಿ ಮಾಡುವುದು ರೈತರು ಮತ್ತು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿರುವಂತೆ ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯರು ಹೇಳುವಂತೆ, “ಇಲ್ಲಿ ಶಾಲಾ, ರೈಲ್ವೆ ಸೇತುವೆ, ನದಿ ಹಾಗೂ ಮಳೆಯ ಕಾಲದಲ್ಲಿ ತುಂಬು ನೀರು ಹರಿಯುವ ಪರಿಸ್ಥಿತಿ ಇದೆ. ಇಂತಹ ತ್ಯಾಜ್ಯ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗಿ, ನಮ್ಮ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿಗೆ ಅಪಾಯ ಉಂಟಾಗಬಹುದು.”
ಗ್ರಾಮದವರ ಆರೋಪದಂತೆ, ಜಿಲ್ಲಾಡಳಿತ ಈ ತ್ಯಾಜ್ಯ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, ಗ್ರಾಮಸ್ಥರ ಅಭಿಪ್ರಾಯವಿಲ್ಲದೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಿ, ಘಟಕದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂಬುದು ಗ್ರಾಮಸ್ಥರ ಮನವಿ.
“ನಮ್ಮ ಹಳ್ಳಿಗೆ ತ್ಯಾಜ್ಯ ಘಟಕ ಬಂದರೆ, ನಾವು ಅಜೀವ ಹೋರಾಟ ನಡೆಸುತ್ತೇವೆ. ಇದು ಕೇವಲ ಪರಿಸರದ ವಿಷಯವಲ್ಲ, ನಮ್ಮ ಬದುಕಿನ ಹಕ್ಕಿನ ಪ್ರಶ್ನೆ.”ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ