ಯಶಸ್ಸಿಗೆ ಶ್ರದ್ಧೆ, ಶ್ರಮ ಮತ್ತು ಶುದ್ಧತೆ ಅಗತ್ಯ: ಸ್ವಾಮಿ ನಿತ್ಯದೀಪಾನಂದಜಿ

0
44

ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಾರನೇ ಉಪನ್ಯಾಸ

ಯಶಸ್ಸು ಎಂದರೆ ಕೇವಲ ಹೆಸರು, ಹುದ್ದೆ, ವೈಭವವಲ್ಲ. ಅದು ವ್ಯಕ್ತಿಯ ಒಳಗಿನ ಶಕ್ತಿಯ ವ್ಯಕ್ತೀಕರಣ. ಸ್ವಾಮಿ ವಿವೇಕಾನಂದರು ಸದಾ ಯುವಕರಿಗೆ ಮನದಟ್ಟಾಗಿ ಒತ್ತಿ ಹೇಳಿದ ಒಂದು ಮಾತು — “ನೀವು ದೇವರುಗಳು; ನಿಮ್ಮ ಶಕ್ತಿಯನ್ನು ಅರಿಯಿರಿ” ಅವರ ದೃಷ್ಟಿಯಲ್ಲಿ ಯಶಸ್ಸಿನ ಮೂಲ ಶಕ್ತಿ ಆತ್ಮವಿಶ್ವಾಸ. ಈ ಆತ್ಮವಿಶ್ವಾಸವೇ ವ್ಯಕ್ತಿಯಲ್ಲಿರುವ ಅಪಾರ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಜೀವನದಲ್ಲಿ ಗುರಿ ಅತ್ಯಂತ ಅಗತ್ಯ; ಗುರಿಯಿಲ್ಲದವರು ದಿಕ್ಕಿಲ್ಲದ ಹಡಗಿನಂತೆ. ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ, ಅದನ್ನು ಸಾಧಿಸಲು ಶ್ರದ್ಧೆ, ಶ್ರಮ, ಶಿಸ್ತು ಮತ್ತು ಧೈರ್ಯದಿಂದ ಪ್ರಯತ್ನಿಸಬೇಕು.
ವಿವೇಕಾನಂದರು ಉತ್ತಿಷ್ಠತ, ಜಾಗ್ರತ, ಎಂದು ಉಪದೇಶಿಸಿದರು. ಎಚ್ಚರವಾಗಿರಿ, ಎದ್ದು ನಿಂತು ಸಾಧನೆಗೆ ಹೊರಟು, ಗುರಿಯನ್ನು ತಲುಪಿ ಬನ್ನಿ. ಜೀವನದಲ್ಲಿ ಶ್ರದ್ಧೆ, ಪರಿಶ್ರಮ, ಶುದ್ಧತೆ ಮತ್ತು ಸತ್ಕಾರ್ಯದಲ್ಲಿ ನಿರಂತರ ತೊಡಗಿರುವ ಶಕ್ತಿ ಯಶಸ್ಸಿಗೆ ದಾರಿ ತೋರಿಸುತ್ತದೆ. ಶ್ರದ್ಧೆಯಿರುವವನಿಗೆ ಜ್ಞಾನ ಲಭ್ಯವಾಗುತ್ತದೆ.
ಅವರ ಚಿಂತನೆ ಪ್ರಕಾರ ಯಶಸ್ಸಿಗೆ ಯಾವುದೇ ಶಾರೀರಿಕ ಅಥವಾ ಬಾಹ್ಯ ಅಡೆತಡೆಯಿಲ್ಲ. ಅಡಚಣೆಗಳೆಲ್ಲವೂ ಮನಸ್ಸಿನಲ್ಲಿವೆ. ಅಂತಹ ಅಡಚಣೆಗಳನ್ನು ಮೀರಿ, ಆತ್ಮಶಕ್ತಿ ಮತ್ತು ದೃಢ ಸಂಕಲ್ಪದಿAದ ಮುನ್ನಡೆಯಲು ಅವರು ಪ್ರೇರಣೆ ನೀಡಿದರು. ಆತ್ಮವಿಶ್ವಾಸ, ಶ್ರದ್ಧೆ, ಶಿಸ್ತು, ಶುದ್ಧ ಮನಸ್ಸು ಮತ್ತು ಸೇವಾ ಮನೋಭಾವದಿಂದಲೇ ಜೀವನದಲ್ಲಿ ನಿಜವಾದ ಯಶಸ್ಸು ಸಿಗಲು ಸಾಧ್ಯವಿದೆ ಎಂದು ಸ್ವಾಮಿ ವಿವೇಕಾನಂದರು ನಮಗೆ ಸ್ಪಷ್ಟವಾಗಿ ಬೋಧಿಸಿದ್ದಾರೆ. ಎಂದು ರಾಮಕೃಷ್ಣ ಮಠ, ಮಧುರೈ ಮುಖ್ಯಸ್ಥರಾದ ಸ್ವಾಮಿ ನಿತ್ಯದೀಪಾನಂದಜಿ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಾರನೇ ಉಪನ್ಯಾಸದಲ್ಲಿ “ವಿವೇಕಾನಂದರ ಕನಸಿನ ಭಾರತ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರಿನ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ನಿರ್ದೇಶಕರಾದ ಡಾ. ಮೋಲಿ ಎಸ್.್ರ ಚೌಧರಿ, ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಹಾಗೂ ಉಪನ್ಯಾಸಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಸಹ ಪ್ರಾಧ್ಯಾಪಕರಾದ ಮಾನಸ ವಂದಿಸಿದರು. ಸಹ ಪ್ರಾಧ್ಯಾಪಕರಾದ ದಿವ್ಯ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here