ಒಂದು ಕರೆಗೂ ಪರದಾಟ : ಪಾಲಡ್ಕ, ಕಡಂದಲೆಯಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರ

0
52

ಹೊಸ ಮೊಬೈಲ್ ಟವರ್‌ಗೆ ಪಾಲಡ್ಕ ಗ್ರಾಮಸ್ಥರ ಆಗ್ರಹ

ಮೂಡುಬಿದಿರೆ : ಡಿಜಿಟಲ್ ಸೇವೆಗಳು ಜೀವನದ ಅವಿಭಾಜ್ಯ ಅಂಗವಾಗಿರುವ ಈ ಕಾಲಘಟ್ಟದಲ್ಲಿಯೂ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ ಹಾಗೂ ಜೋಡಿಕಟ್ಟೆ ಪ್ರದೇಶಗಳ ನೂರಾರು ಕುಟುಂಬಗಳು ಮೂಲಭೂತ ಮೊಬೈಲ್ ನೆಟ್‌ವರ್ಕ್ ಸೌಲಭ್ಯದಿಂದಲೇ ವಂಚಿತವಾಗಿವೆ. ಹಲವು ವರ್ಷಗಳಿಂದ ಮುಂದುವರಿದಿರುವ ಈ ಸಮಸ್ಯೆಯಿಂದ ಸಾರ್ವಜನಿಕರ ದೈನಂದಿನ ಸಂಪರ್ಕ ವ್ಯವಸ್ಥೆ ಮಾತ್ರವಲ್ಲದೆ ತುರ್ತು ಆರೋಗ್ಯ ಸೇವೆಗಳು, ಶಿಕ್ಷಣ, ಸರ್ಕಾರಿ ಆಡಳಿತ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯಗಳ ಮೇಲೂ ಗಂಭೀರ ಪರಿಣಾಮ ಉಂಟಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ಕರೆ ಮಾಡಲು ಪರದಾಟ

ಈ ಪ್ರದೇಶಗಳಲ್ಲಿ ಪ್ರಮುಖ ದೂರಸಂಪರ್ಕ ಸಂಸ್ಥೆಗಳ ಸಿಗ್ನಲ್ ಸಮರ್ಪಕವಾಗಿ ಲಭ್ಯವಾಗದ ಕಾರಣ ಸಾಮಾನ್ಯ ಮೊಬೈಲ್ ಕರೆ ಮಾಡಲೂ ನಿವಾಸಿಗಳು ಮನೆಯ ಹೊರಗೆ ಅಥವಾ ರಸ್ತೆ ಬದಿಯ ನಿರ್ದಿಷ್ಟ ಸ್ಥಳಗಳಿಗೆ ತೆರಳಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಕರೆ ಮಧ್ಯದಲ್ಲೇ ಕಡಿತಗೊಳ್ಳುವುದು ಅಥವಾ ಸಂಪರ್ಕವೇ ಸಿಗದಿರುವುದು ಸಾಮಾನ್ಯವಾಗಿದೆ.

ಹಠಾತ್ ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯರು, ಆಸ್ಪತ್ರೆ, ರಿಕ್ಷಾ ಅಥವಾ ಆಂಬ್ಯುಲೆನ್ಸ್‌ಗೆ ಸಂಪರ್ಕಿಸಲು ಸಾಧ್ಯವಾಗದೆ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕದ ಕೊರತೆಯಿಂದ ಗ್ರಾಮಸ್ಥರು ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಶಿಕ್ಷಕರ ಬಯೋಮೆಟ್ರಿಕ್ ಹಾಜರಾತಿಗೂ ಅಡ್ಡಿ

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಶಿಕ್ಷಣ ಕ್ಷೇತ್ರಕ್ಕೂ ತೀವ್ರ ಪರಿಣಾಮ ಬೀರಿದೆ. ವಿದ್ಯಾಗಿರಿ ಶಾಲೆ ಹಾಗೂ ಕಡಂದಲೆ ಸುಬ್ರಮಣ್ಯ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಪ್ರತಿದಿನ ಸರ್ಕಾರಿ ನಿಯಮದಂತೆ ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಬೇಕಿದೆ. ಆದರೆ ಶಾಲಾ ಆವರಣದಲ್ಲೇ ಸಮರ್ಪಕ ನೆಟ್‌ವರ್ಕ್ ಇಲ್ಲದ ಕಾರಣ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಇದರಿಂದ ಕರ್ತವ್ಯಕ್ಕೆ ಹಾಜರಾಗಿದ್ದರೂ ತಾಂತ್ರಿಕವಾಗಿ ಗೈರುಹಾಜರಿ ದಾಖಲಾಗುವ ಸಾಧ್ಯತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಸಂಬಳದ ಮೇಲೂ ಪರಿಣಾಮ ಬೀಳುವ ಆತಂಕ ಶಿಕ್ಷಕರಲ್ಲಿ ವ್ಯಕ್ತವಾಗಿದೆ.

ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯವೂ ನೆಟ್‌ವರ್ಕ್ ಸಮಸ್ಯೆಯಿಂದ ಹಿನ್ನಡೆಯಾಗಿದೆ. ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಸಾರ್ವಜನಿಕರ ಮಾಹಿತಿಯನ್ನು ದಾಖಲಿಸಿ ಸ್ಥಳದಲ್ಲೇ ಅಪ್‌ಲೋಡ್ ಮಾಡಬೇಕಾಗುತ್ತದೆ.

ಆದರೆ ಈ ಐದು ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕದ ಕೊರತೆಯಿಂದ ಮಾಹಿತಿ ತಕ್ಷಣವೇ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ನಂತರ ನೆಟ್‌ವರ್ಕ್ ಇರುವ ಸ್ಥಳಗಳಿಗೆ ತೆರಳಿ ಅಪ್‌ಲೋಡ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಯದ ವೇಗ ಕುಂಠಿತವಾಗುತ್ತಿದೆ.

ಇಂದು ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಹಣ ವರ್ಗಾವಣೆ, ಸರ್ಕಾರಿ ಅರ್ಜಿಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು, ಉದ್ಯೋಗ ಸಂಬಂಧಿತ ಮಾಹಿತಿ ವಿನಿಮಯ ಸೇರಿದಂತೆ ಬಹುತೇಕ ಸೇವೆಗಳು ಇಂಟರ್‌ನೆಟ್ ಆಧಾರಿತವಾಗಿವೆ. ಆದರೆ ಈ ಪ್ರದೇಶಗಳ ನಿವಾಸಿಗಳು ಸ್ಥಿರ ಮೊಬೈಲ್ ಸಂಪರ್ಕವಿಲ್ಲದ ಕಾರಣ ಪ್ರತಿಯೊಂದು ಡಿಜಿಟಲ್ ಸೇವೆಗೂ ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿರುವ ಸಂದರ್ಭದಲ್ಲಿ ಮೂಲಭೂತ ಮೊಬೈಲ್ ಸಂಪರ್ಕವೇ ಇಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ ಈ ಸಮಸ್ಯೆ ಹೊಸದೇನಲ್ಲ. ಹಲವು ವರ್ಷಗಳಿಂದ ನಿರಂತರವಾಗಿ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಸಂಬಂಧಪಟ್ಟ ಇಲಾಖೆಗಳು ಹಾಗೂ ದೂರಸಂಪರ್ಕ ಸಂಸ್ಥೆಗಳ ಗಮನಕ್ಕೆ ವಿಷಯವನ್ನು ತಂದಿದ್ದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ ಹಾಗೂ ಜೋಡಿಕಟ್ಟೆ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹರಿಸಲು ತಾಂತ್ರಿಕ ಸಮೀಕ್ಷೆ ನಡೆಸಿ ಸೂಕ್ತ ಸ್ಥಳದಲ್ಲಿ ಹೊಸ ಮೊಬೈಲ್ ಟವರ್ ಅಳವಡಿಸಬೇಕು. ಈಗಿರುವ ನೆಟ್‌ವರ್ಕ್ ವ್ಯವಸ್ಥೆಯನ್ನು ಬಲಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಸಂಪರ್ಕ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಶೇಷ ವರದಿ ಜಗದೀಶ್ ಪೂಜಾರಿ, ಕಡಂದಲೆ

LEAVE A REPLY

Please enter your comment!
Please enter your name here