ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೇಳನೇ ಉಪನ್ಯಾಸ

0
2

“ವಿವೇಕದ ಬೆಳಕು ವಿವೇಕಾನಂದ ಹಾಗೂ ನಾರಾಯಣ ಗುರು ತತ್ವಮೀಮಾಂಸೆ” ಎಂಬ ವಿಷಯವು ಸ್ವಾಮಿ ವಿವೇಕಾನಂದರು ಹಾಗೂ ಶ್ರೀ ನಾರಾಯಣ ಗುರು ಅವರ ಮಹಾನ್ ವ್ಯಕ್ತಿತ್ವ ಮತ್ತು ತತ್ವಚಿಂತನೆಗಳನ್ನು ತಾತ್ವಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಪರಿಚಯಿಸುತ್ತದೆ. ಇಬ್ಬರೂ ಮಹನೀಯರು ಸಮಾಜದಲ್ಲಿ ಸಮಾನತೆ, ಮಾನವೀಯತೆ, ಶಿಕ್ಷಣ ಹಾಗೂ ಆಧ್ಯಾತ್ಮಿಕ ಜಾಗೃತಿಯ ಮಹತ್ವವನ್ನು ಸಾರಿದ ಯುಗಪುರುಷರಾಗಿದ್ದಾರೆ. ಅವರ ಚಿಂತನೆಗಳು ಅನ್ಯಾಯ, ಅಸಮಾನತೆ ಮತ್ತು ಆಜ್ಞಾನವನ್ನು ದೂರಮಾಡಿ ಸಮಾಜದಲ್ಲಿ ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ದಾರಿದೀಪವಾಗಿವೆ.

ಸ್ವಾಮಿ ವಿವೇಕಾನಂದರು ಮಾನವನೊಳಗಿನ ದೈವತ್ವವನ್ನು ಜಾಗೃತಗೊಳಿಸುವುದೇ ಶಿಕ್ಷಣದ ಉದ್ದೇಶವೆಂದು ಪ್ರತಿಪಾದಿಸಿದರು. ಶಿಕ್ಷಣ, ಆತ್ಮವಿಶ್ವಾಸ, ಸೇವೆ ಮತ್ತು ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯವೆಂದು ಅವರು ಸಾರಿದರೆ, ಶ್ರೀ ನಾರಾಯಣ ಗುರುಗಳು ಜಾತಿ ತಾರತಮ್ಯ, ಅಸ್ಪಶ್ಯತೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಪ್ರೀತಿ, ಜ್ಞಾನ ಮತ್ತು ಆಧ್ಯಾತ್ಮಿಕತೆಯ ಮೂಲಕ ಸಮಾಜ ಸುಧಾರಣೆಯ ಸಂದೇಶವನ್ನು ನೀಡಿದರು. ಸ್ವಾಮಿ ವಿವೇಕಾನಂದರು ಹಾಗೂ ಶ್ರೀ ನಾರಾಯಣ ಗುರುಗಳು ಪರಸ್ಪರ ಭೇಟಿಯಾಗದಿದ್ದರೂ, ವಿವೇಕಾನಂದರ ತತ್ವಗಳನ್ನು ನಾರಾಯಣ ಗುರುಗಳು ತಮ್ಮ ಜೀವನ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಅಳವಡಿಸಿಕೊಂಡ ರೀತಿಯನ್ನು ಅವರು ವಿವರಿಸಿದರು. ದಕ್ಷಿಣ ಭಾರತದಲ್ಲಿ ವಿವೇಕಪ್ರಕಾಶದ ಪಸರಣೆ ಹಾಗೂ ಅದರ ಮೂಲಕ ಸಮಾಜದಲ್ಲಿ ಉಂಟಾದ ಜಾಗೃತಿಯ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ಹಿಂಸೆ, ಕ್ರಾಂತಿ ಅಥವಾ ಪ್ರತೀಕಾರವಲ್ಲ; ಶಿಕ್ಷಣ, ಆತ್ಮಜಾಗೃತಿ, ಪರಸ್ಪರ ಗೌರವ ಮತ್ತು ಸೇವಾಭಾವವೇ ಶಾಶ್ವತ ಬದಲಾವಣೆಯ ಮಾರ್ಗವೆಂದು ಇಬ್ಬರೂ ಮಹನೀಯರು ಪ್ರತಿಪಾದಿಸಿದರು.

ಉತ್ತಮ ನಾಯಕನಾಗಬೇಕಾದರೆ ಸ್ವಾಮಿ ವಿವೇಕಾನಂದರು ಹಾಗೂ ಶ್ರೀ ನಾರಾಯಣ ಗುರುಗಳ ಜೀವನವನ್ನು ಆದರ್ಶವಾಗಿ ಕಾಣಬೇಕು. ಶಿಕ್ಷಣವನ್ನು ಪಡೆದರೆ ಮಾತ್ರ ಸಾಲದು; ಪ್ರಜ್ಞಾವಂತರಾಗಬೇಕು. ಶಿಕ್ಷಣವು ಪ್ರಜ್ಞಾವಂತಿಕೆಯನ್ನು ಬೆಳೆಸುವ ಪ್ರಮುಖ ದಾರಿಯಾಗಿದೆ. ಜ್ಞಾನವು ವ್ಯಕ್ತಿಯನ್ನು ವಿದ್ಯಾವಂತನನ್ನಾಗಿಸಿದರೆ, ಪ್ರಜ್ಞೆಯು ಅವನನ್ನು ಸಮಾಜಕ್ಕೆ ಮಾರ್ಗದರ್ಶಕನನ್ನಾಗಿ ರೂಪಿಸುತ್ತದೆ. ಇಂದಿನ ಯುವಜನತೆ ಇವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಾತಿ, ಮತ ಮತ್ತು ಭಾಷೆಯ ಭೇದಗಳನ್ನು ಮೀರಿ ನ್ಯಾಯಯುತ, ಸಮಾನತೆಯ ಮತ್ತು ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಕಾಸರಗೋಡು ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರತ್ನಾಕರ ಮಲ್ಲಮೂಲೆ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೇಳನೇ ಉಪನ್ಯಾಸ ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಇವರ ಸಹಯೋಗದೊಂದಿಗೆ ನಡೆಯುತ್ತಿರುವ ವಿವೇಕ ಸ್ಮತಿ ಕಾರ್ಯಕ್ರಮದ ಮೂವತ್ತನೇ ಉಪನ್ಯಾಸದಲ್ಲಿ “ವಿವೇಕದ ಬೆಳಕು ವಿವೇಕಾನಂದ ಹಾಗೂ ನಾರಾಯಣ ಗುರು ತತ್ವಮೀಮಾಂಸೆ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇಲ್ಲಿ ಜರುಗಿತು.

ಈ ಸಂದರ್ಭದಲ್ಲಿ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ಪ್ರಾಂಶುಪಾಲರಾದ ಪ್ರೊ. ಶ್ರೀ ಕೃಷ್ಣ ಗಣರಾಜ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತೀಯ ಸಂಸ್ಕೃತಿ

ಹಾಗೂ ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ವಿದ್ಯಾ ಎಸ್.. ಐಕ್ಯೂಎಸಿ ಸಂಯೋಜಕರಾದ ಡಾ. ರವಿಕಲಾ, ನಿವೃತ್ತ ಭಾರತೀಯ ಯೋಧರಾದ ಶ್ರೀ ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗಡೆ ಅವರು ಸ್ವಾಗತಿಸಿ, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ವಿಜಯ ಸರಸ್ವತಿ ಬಿ ಅವರು ಕಾರ್ಯಕ್ರಮದ ಸಂಯೋಜನೆ ವಹಿಸಿ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಕೌಸಲ್ಯ ಎನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.