ಮಂಗಳೂರು : ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಅಭಿವೃದ್ಧಿಯ ಹೊಸ ದಾರಿ ತೆರೆದಂತಾಗುತ್ತದೆ. ಆದರೆ ಮಂಗಳೂರಿನ ಹೊರವಲಯದ ಕಾರಮೊಗರು ಗ್ರಾಮಸ್ಥರಿಗೆ ಹೆದ್ದಾರಿಯೇ ಇಂದು ಸಂಕಷ್ಟದ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಐತಿಹಾಸಿಕ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬಿಕರ್ನಕಟ್ಟೆ – ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಗುರುಪುರ ಬಂಡಸಾಲೆ ವ್ಯಾಪ್ತಿಯ ಕಾರಮೊಗರು ಗ್ರಾಮವನ್ನು ಹಾದು ಹೋಗಿದೆ. ಹೆದ್ದಾರಿ ಗ್ರಾಮದ ಸಂಪರ್ಕ ರಸ್ತೆಯ ಮೇಲ್ಭಾಗದಲ್ಲೇ ನಿರ್ಮಾಣವಾಗಿರುವುದರಿಂದ ಗ್ರಾಮಸ್ಥರಿಗೆ ನೇರ ಸಂಪರ್ಕವೇ ಕಡಿತಗೊಂಡಿದೆ. ಅಬ್ಬಕ್ಕ ರಾಣಿಯ ಕಾಲದಿಂದಲೂ ಬಳಕೆಯಲ್ಲಿದ್ದ ಈ ಐತಿಹಾಸಿಕ ರಸ್ತೆ ಇದೀಗ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಂತಾಗಿದೆ.
ಗ್ರಾಮದಲ್ಲಿ ಹತ್ತಾರು ಮನೆಗಳಿದ್ದು, ಸುಮಾರು 50ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಹಿಂದೆ ಕೇವಲ ಐದು ನಿಮಿಷಗಳಲ್ಲಿ ತಲುಪಬಹುದಾಗಿದ್ದ ಸ್ಥಳಗಳಿಗೆ ಈಗ ಆರರಿಂದ ಏಳು ಕಿಲೋಮೀಟರ್ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಅನಾರೋಗ್ಯಕ್ಕೊಳಗಾಗುವ ವೃದ್ಧರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಾರಮೊಗರು ಗ್ರಾಮದಲ್ಲಿ ಎರಡು ದೇವಸ್ಥಾನಗಳು ಹಾಗೂ ಒಂದು ದೈವಸ್ಥಾನವಿದ್ದು, ಧಾರ್ಮಿಕ ಆಚರಣೆಗಳಿಗೂ ರಸ್ತೆ ಸಂಪರ್ಕ ಅತ್ಯಗತ್ಯವಾಗಿತ್ತು. ಸಮೀಪದ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವದ ಬಳಿಕ ನಡೆಯುವ ಅವಭ್ರತೋತ್ಸವ ಹಾಗೂ ದೈವಸ್ಥಾನದ ಮಾರಿ ಕಾರ್ಯಕ್ರಮಗಳು ಇದೇ ರಸ್ತೆಯ ಮೂಲಕ ಸಾಗುತ್ತಿದ್ದವು. ರಸ್ತೆ ಬಂದ್ ಆದ ಬಳಿಕ ಈ ಧಾರ್ಮಿಕ ಕಾರ್ಯಕ್ರಮಗಳಿಗೂ ಅಡಚಣೆ ಉಂಟಾಗಿದೆ.
ಹೆದ್ದಾರಿ ಕಾಮಗಾರಿ ಆರಂಭವಾದಾಗಲೇ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಂಪರ್ಕಕ್ಕೆ ಅಂಡರ್‌ಪಾಸ್ ನಿರ್ಮಿಸಿ ರಸ್ತೆ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಬಳಿಕ ಪರಂಬೋಕು ರಸ್ತೆಯನ್ನು ಪ್ರಭಾವಿ ವ್ಯಕ್ತಿಯೊಬ್ಬರು ಮುಚ್ಚಿರುವುದರಿಂದ ಅಂಡರ್‌ಪಾಸ್ ಇದ್ದರೂ ಅದು ಗ್ರಾಮಸ್ಥರಿಗೆ ಪ್ರಯೋಜನಕಾರಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಳೆದ ಎರಡು ವರ್ಷಗಳಿಂದ ರಸ್ತೆ ಸಂಪರ್ಕಕ್ಕಾಗಿ ಗ್ರಾಮಸ್ಥರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಎನ್‌ಎಚ್‌ಎಐ ಅಧಿಕಾರಿಗಳು, ತಹಶೀಲ್ದಾರ್, ಸಹಾಯಕ ಆಯುಕ್ತರು, ಸಂಸದರು ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ.
ಹೆದ್ದಾರಿ ಅಭಿವೃದ್ಧಿಯ ನಡುವೆ ಮೂಲಭೂತ ರಸ್ತೆ ಸಂಪರ್ಕ ಕಳೆದುಕೊಂಡಿರುವ ಕಾರಮೊಗರು ಗ್ರಾಮಸ್ಥರ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತು ಸ್ಪಂದನೆ ನೀಡಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

