ಬದುಕಿನ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳಿಗೆ ನೆಮ್ಮದಿ ನೀಡಿ, ಅವರಲ್ಲಿ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುವ ದಿವ್ಯ ದಿಕ್ಸೂಚಿ ಭಗವದ್ಗೀತೆ.
ಇತ್ತೀಚೆಗೆ ಪೆರ್ಲ ಭಾರತೀ ಸದನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪ್ರೇರಣಾ ಮತ್ತು ವ್ಯಕ್ತಿತ್ವ ವಿಕಸನ ಸಂವಾದವು ಇದಕ್ಕೆ ಸಾಕ್ಷಿಯಾಯಿತು.
ಕರಾಡ ಅಭ್ಯುದಯ ಸಂಘ ಅಗಲ್ಪಾಡಿ ಹಾಗೂ ಕರಾಡ ಸುವರ್ಣ ಸಂಭ್ರಮ ಸಮಿತಿ-2026 ರ ಜಂಟಿ ಆಶ್ರಯದಲ್ಲಿ ನಡೆದ ಈ ಅಪೂರ್ವ ಸಮಾರಂಭದಲ್ಲಿ,
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೇಂದ್ರೀಯ ವಿದ್ಯಾಲಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್. ಭಟ್ ಸೈಪಂಗಲ್ಲು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನೆರೆದಿದ್ದ ನೂರಾರು ಹಿರಿಯರಿಗೆ ಹೊಸ ಭರವಸೆಯ ಆಶಾಕಿರಣ ಮೂಡಿಸಿದರು.

ಸಂಭ್ರಮದ ಕ್ಷಣಗಳು
ಹೃದಯಸ್ಪರ್ಶಿ ಸಂವಾದದಲ್ಲಿ ಸಮುದಾಯದ 150ಕ್ಕೂ ಹೆಚ್ಚು ಹಿರಿಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಎಸ್.ಎನ್. ಭಟ್ ಅವರು ರೂಪಿಸಿದ್ದ ಸೃಜನಾತ್ಮಕ ಸರಳ ಚಟುವಟಿಕೆಗಳ ಮೂಲಕ, ಮನದ ಮಾತುಗಳ ಮೂಲಕ ಹಿರಿಯರು ತಮ್ಮ ಬಾಲ್ಯ ಹಾಗೂ ಕೌಟುಂಬಿಕ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಮಕ್ಕಳಂತೆ ಸಂಭ್ರಮಿಸಿದರು.
ಆಟಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ಭಗವದ್ಗೀತೆಯ “ಉದ್ಧರೇದಾತ್ಮನಾತ್ಮಾನಂ…” ಶ್ಲೋಕದ ಮೂಲಕ “ನಮ್ಮ ಆಲಸ್ಯವೇ ನಮಗೆ ಶತ್ರು, ಆತ್ಮವಿಶ್ವಾಸವೇ ನಮಗೆ ಮಿತ್ರ” ಎಂಬ ಸಂದೇಶವನ್ನು ಹಿರಿಯರ ಮನಮುಟ್ಟುವಂತೆ ವಿವರಿಸಲಾಯಿತು.ಭಾಗವಹಿಸಿದ ಹಿರಿಯರಿಂದ ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯ ಕ್ತ ವಾದುವು.
ಮಾತೃ-ಪಿತೃ ಹಾಗೂ ಹಿರಿಯರನ್ನು ಕೇವಲ ಮೂಕಪ್ರೇಕ್ಷಕರನ್ನಾಗಿ ಮಾಡದೆ, ಅವರನ್ನು ಅತ್ಯಂತ ಗೌರವದಿಂದ ನಡೆಸುವುದು ಇಂದಿನ ಆಧುನಿಕ ಸಮಾಜದ ಪರಮ ಕರ್ತವ್ಯವಾಗಿದೆ. ವೃದ್ಧಾಪ್ಯದಲ್ಲಿ ಅವರಿಗೆ ಬೇಕಾಗಿರುವುದು ಕೇವಲ ಆರ್ಥಿಕ ಭದ್ರತೆಯಲ್ಲ, ಬದಲಿಗೆ ಮಕ್ಕಳ ಪ್ರೀತಿ, ಆಪ್ತತೆ ಮತ್ತು ಗೌರವದ ಆಶ್ರಯ. ಹೆತ್ತವರನ್ನು ಮತ್ತು ಹಿರಿಯರನ್ನು ಕಡೆಗಣಿಸದೆ, ಅವರ ಸುದೀರ್ಘ ಜೀವನದ ಅನುಭವದ ಬುತ್ತಿಯನ್ನು ಗೌರವಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಾವು ಮುಕ್ತ ಅವಕಾಶ ಕಲ್ಪಿಸಬೇಕಿದೆ. ಹಿರಿಯರ ಮುಖದ ಮೇಲಿನ ತೃಪ್ತಿಯ ನಗು ಹಾಗೂ ಅವರ ಹೃದಯದ ಆಶೀರ್ವಾದವೇ ನಮ್ಮ ಸಮಾಜದ ನಿಜವಾದ ಯಶಸ್ಸು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ.

