ಟ್ಯಾಂಕ್ ಇದೆ, ಬೋರ್‌ವೆಲ್ ಇದೆ.. ಆದ್ರೆ ನೀರಿಲ್ಲ! ಬೆಳ್ತಂಗಡಿಯ ಬೆಳಾಲು ಗ್ರಾಮದ ಜನರಿಗೆ ಕಲುಷಿತ ಗುಂಡಿ ನೀರೇ ಗತಿ

0
59

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಾಯ ಪರಿಸರದ ಮುಂಡ್ರೋಟ್ಟು ಭಾಗದ ನಿವಾಸಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ದೈನಂದಿನ ಅಗತ್ಯಗಳಿಗಾಗಿ ಕಲುಷಿತಗೊಂಡ ಹೊಂಡದ ನೀರನ್ನೇ ಅವಲಂಬಿಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ, ಮಹಿಳೆಯರು ಹಾಗೂ ಮಕ್ಕಳು ಕೀಟಗಳು, ಕಸಕಡ್ಡಿಗಳು ಮತ್ತು ಮಣ್ಣಿನಿಂದ ಕಲುಷಿತಗೊಂಡಿರುವ ಹೊಂಡದ ನೀರನ್ನು ಕೊಡಗಳಲ್ಲಿ ತುಂಬಿಸಿಕೊಂಡು ಮನೆಗಳಿಗೆ ಸಾಗಿಸುತ್ತಿದ್ದಾರೆ. ಕುಡಿಯಲು, ಅಡುಗೆಗೆ, ಸ್ನಾನಕ್ಕೆ ಸೇರಿದಂತೆ ಎಲ್ಲಾ ಗೃಹ ಬಳಕೆಗಳಿಗೂ ಇದೇ ನೀರನ್ನು ಬಳಸಲಾಗುತ್ತಿದ್ದು, ಸ್ಥಳೀಯರ ಆರೋಗ್ಯದ ಬಗ್ಗೆ ಗಂಭೀರ ಆತಂಕ ವ್ಯಕ್ತವಾಗಿದೆ.

ಈ ದುಸ್ಥಿತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಜೆ ಶಿವು (@vj___shivu) ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಅಸಮಾಧಾನಕ್ಕೆ ಕಾರಣವೇನೆಂದರೆ, ಮುಂಡ್ರೋಟ್ಟು ನಿವಾಸಿಗಳ ಮನೆಗಳಿಂದ ಕೇವಲ 500 ಮೀಟರ್ ದೂರದಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ನಿರ್ಮಿಸಲಾದ ಬೃಹತ್ ಓವರ್‌ಹೆಡ್ ವಾಟರ್ ಟ್ಯಾಂಕ್, ಬೋರ್‌ವೆಲ್ ಮತ್ತು ಮೋಟಾರ್ ಶೆಡ್ ಈಗಾಗಲೇ ಅಸ್ತಿತ್ವದಲ್ಲಿವೆ. ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಯೋಜನೆ ಬಹುತೇಕ ಪೂರ್ಣಗೊಂಡಿದ್ದರೂ ಇದುವರೆಗೆ ಸಾರ್ವಜನಿಕರಿಗೆ ನೀರು ಸರಬರಾಜು ಆರಂಭವಾಗಿಲ್ಲ.

“ಎಲ್ಲಾ ಮೂಲಸೌಕರ್ಯಗಳು ಸಿದ್ಧವಾಗಿದ್ದರೂ ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯ ಹಾಗೂ ಸಮನ್ವಯದ ಕೊರತೆಯಿಂದ ನಮಗೆ ನೀರು ಸಿಗುತ್ತಿಲ್ಲ” ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರತಿದಿನ ದೂರದ ಹೊಂಡಗಳಿಂದ ನೀರು ತರುವ ಕಷ್ಟ ಮಹಿಳೆಯರು ಮತ್ತು ವೃದ್ಧರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ.

ಈ ಗಂಭೀರ ಸಮಸ್ಯೆ ಇನ್ನೂ ಜನಪ್ರತಿನಿಧಿಗಳ ಗಮನಕ್ಕೆ ಸಮರ್ಪಕವಾಗಿ ಬಂದಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳ ಮೂಲಕ ಸಮಸ್ಯೆಯನ್ನು ಬೆಳಕಿಗೆ ತಂದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಿದ್ಧಗೊಂಡಿರುವ ನೀರಿನ ಟ್ಯಾಂಕ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಶೀಘ್ರ ಕಾರ್ಯಗತಗೊಳಿಸಿ, ಮುಂಡ್ರೋಟ್ಟು ಪರಿಸರದ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here