ಆಟದ ಮೈದಾನ ಉಳಿಸಿ ಮಕ್ಕಳ ಹಕ್ಕು ಕಾಪಾಡಿದ ತುಳುನಾಡ ರಕ್ಷಣಾ ವೇದಿಕೆ

0
6

ಬೈರಂಪಳ್ಳಿ : ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳರ್ಪಾಡಿ ಗ್ರಾಮದ ಮಾಣೈ ಹರಿಖಂಡಿಗೆ ರಸ್ತೆ ಸಮೀಪ ಇರುವ ಸರ್ಕಾರಿ ಆಟದ ಮೈದಾನವನ್ನು ಅತಿಕ್ರಮಿಸುವ ಪ್ರಯತ್ನವನ್ನು ತಡೆಯುವಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹತ್ವದ ಪಾತ್ರ ವಹಿಸಿದ್ದು, ಸುಮಾರು 38 ವರ್ಷಗಳಿಂದ ಗ್ರಾಮಸ್ಥರು, ಮಕ್ಕಳು ಹಾಗೂ ಯುವಕರು ಬಳಸಿಕೊಂಡು ಬರುತ್ತಿದ್ದ ಮೈದಾನವನ್ನು ಪುನಃ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.

ಸ್ಥಳೀಯ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ವಾಲಿಬಾಲ್ ಮೈದಾನದ ಮಧ್ಯಭಾಗದಲ್ಲಿ ಜೆಸಿಬಿ ಮೂಲಕ ಹೊಂಡ ತೋಡಿ, ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿಪಡಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಗ್ರಾಮಸ್ಥರು ಹಾಗೂ ಯುವಕರು ತುಳುನಾಡ ರಕ್ಷಣಾ ವೇದಿಕೆಯನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಅವರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್ ಹಾಗೂ ಉಪಾಧ್ಯಕ್ಷ ಗುಣಾಕಾರ್ ಸೇರಿದಂತೆ ಪ್ರಮುಖರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ದೂರಿನ ಮೇರೆಗೆ ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳಿಂದ ಕಂದಾಯ ಇಲಾಖೆ ಸರ್ವೇ ಪೂರ್ಣಗೊಳ್ಳುವವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಮುಚ್ಚಳಿಕೆ ಬರೆಸಿಕೊಂಡರು. ಬಳಿಕ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಆಟದ ಮೈದಾನವನ್ನು ಉಳಿಸುವಂತೆ ಆಗ್ರಹಿಸಲಾಯಿತು.

ಸಂಘಟನೆಯ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ ಹಾಗೂ ಸರ್ವೇ ನಡೆಸಿತು. ಪರಿಶೀಲನೆಯ ವೇಳೆ ವಿವಾದಿತ ಜಾಗ ಸರ್ಕಾರಿ ಆಟದ ಮೈದಾನಕ್ಕೆ ಸೇರಿದ್ದು, ಖಾಸಗಿ ವ್ಯಕ್ತಿಗಳಿಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ ಎಂಬುದು ಸ್ಪಷ್ಟಗೊಂಡಿತು. ಅಧಿಕಾರಿಗಳು ಸ್ಥಳಕ್ಕೆ ಗಡಿ ಗುರುತು ನಿಗದಿಪಡಿಸಿ ಸರ್ವೇ ಕಲ್ಲುಗಳನ್ನು ಅಳವಡಿಸುವ ಮೂಲಕ ಸರ್ಕಾರಿ ಜಾಗವನ್ನು ಸಂರಕ್ಷಿಸಿದರು.

ಇದಾದ ಬಳಿಕ ಮಕ್ಕಳ ಹಾಗೂ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಜೆಸಿಬಿ ಮೂಲಕ ಹೊಂಡಗಳನ್ನು ಮುಚ್ಚಿ ಮೈದಾನವನ್ನು ಸಮತಟ್ಟು ಮಾಡಲಾಯಿತು. ಇದರಿಂದ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿದ್ದು, ಮತ್ತೆ ಕ್ರೀಡಾ ಚಟುವಟಿಕೆಗಳಿಗೆ ಮುಕ್ತ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಉಪಾಧ್ಯಕ್ಷ ಗುಣಾಕಾರ್, ಪ್ರಧಾನ ಕಾರ್ಯದರ್ಶಿ ರಂಜಿತ್, ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮದ ಮಕ್ಕಳ ಕ್ರೀಡಾ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಅದಿಕಾರಿಗಳ ತ್ವರಿತ ಕ್ರಮಕ್ಕೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ವಿವಿಧ ಪಕ್ಷದ ನಾಯಕರುಗಳಿಗೆ ಗ್ರಾಮಸ್ಥರು ಅಭಿನಂದಿಸಿದ್ದು, ತುಳುನಾಡ ರಕ್ಷಣಾ ವೇದಿಕೆಯ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here