ತುಳುನಾಡಿನ ಅಳಿಯ ಕಟ್ಟು ಸಂತತಿಯ ಕುಲಾಲ, ಮೂಲ್ಯ ಸಮುದಾಯದ ಅಳಿದು ಹೋಗುವ ಮೂಲ ಕಟ್ಟ್ ಕಟ್ಟಲೆಯ ತುಲಿಪು ಕಾರ್ಯಕ್ರಮ

0
13

ಮಂಜೇಶ್ವರ : ತುಳುನಾಡಿನ ಅಳಿಯಕಟ್ಟು ಸಂತತಿಯ ಕುಲಾಲ, ಮೂಲ್ಯ ಸಮುದಾಯದ ಅಳಿದು ಹೋಗುತ್ತಿರುವ ಮೂಲ ಕಟ್ಟು-ಕಟ್ಟಲೆಗಳು, ಆಚಾರ-ವಿಚಾರ ಹಾಗೂ ಸಂಪ್ರದಾಯಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ “ಅಳಿಯಕಟ್ಟು ಸಂತತಿಯ ಮೂಲ ಕಟ್ಟು-ಕಟ್ಟಲೆಯ ತುಲಿಪು” ಕಾರ್ಯಕ್ರಮವು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡು ಕುಲಾಲ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ಕುಲಾಲ ಶ್ರೀ ಸಾಹಿತ್ಯ ಕಲಾಸಂಪದ, ದೇರಳಕಟ್ಟೆ ವತಿಯಿಂದ ಮಹೇಶ್ ಕುಲಾಲ್ ಅರ್ತಿಮೂಲೆ ಅವರ ಸಮರ್ಥ ಸಾರಥ್ಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು, ತುಳುನಾಡಿನ ಕುಲಾಲ ಸಮುದಾಯದಲ್ಲಿ ಮೊದಲ ಬಾರಿಗೆ ನಡೆದ ವಿಶಿಷ್ಟ ದಾಖಲಾತಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ತುಳುನಾಡಿನ ಅಳಿಯಕಟ್ಟು ಪದ್ಧತಿಯ ಇತಿಹಾಸ, ಭೂತಾಳ ಪಾಂಡ್ಯರ ಕಾಲದಲ್ಲಿ ರೂಪುಗೊಂಡ ಬಳಿಗಳು, ಗೋತ್ರಗಳು, ತರವಾಡು ಪದ್ಧತಿ, ಮದುವೆ ಹಾಗೂ ಮರಣ ಸಂಸ್ಕಾರ ಸೇರಿದಂತೆ ಸಂಪ್ರದಾಯಗಳ ಕುರಿತು ಹಿರಿಯರು, ಗುರಿಕಾರರು ಹಾಗೂ ತರವಾಡು ಮನೆಗಳ ಮುಖ್ಯಸ್ಥರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ವಹಿಸಿದ್ದರು. ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಪದವು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಸೀತಾರಾಮ ಬಂಗೇರ ಕೊಲ್ಯ, ಡಿ. ಚಂದಪ್ಪ ಮೂಲ್ಯ (ಉಪ್ಪಿನಂಗಡಿ), ರಮೇಶ್ ಸಾಲ್ಯಾನ್ (ಪಿಲಿಕೂರು), ಗೋಪಾಲಕೃಷ್ಣ ಸಾಲ್ಯಾನ್ (ಕಣ್ವತೀರ್ಥ), ರಾಮ್ ಪ್ರಸಾದ್ (ವಕೀಲರು), ಪ್ರಕಾಶ್ ಕುಲಾಲ (ಚಾರಮೋಗೆರು), ಶಾರದ ಐತ್ತಪ್ಪ (ಕೊಣಾಜೆ), ದಯಾನಂದ ಮುಜಂಗಾವು, ಕುಶಲಾಕ್ಷಿ ಕಣ್ವತೀರ್ಥ, ವಿಶ್ವನಾಥ ಚಾರಮೋಗೆರು, ನಾರಾಯಣ ಪೆರ್ನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಬೆಳಗ್ಗೆಯಿಂದ ಸಂಜೆ 6.30ರವರೆಗೆ ನಡೆದ ‘ತುಲಿಪು’ ಸಮಾಲೋಚನೆಯಲ್ಲಿ ಕಾಸರಗೋಡು ಜಿಲ್ಲೆಯ ಹಿರಿಯರು, ಗುರಿಕಾರರು, ತರವಾಡು ಮನೆಗಳ ಮುಖ್ಯಸ್ಥರು ಹಾಗೂ ನಾಗಮೂಲ ಸ್ಥಾನಗಳ ಪ್ರತಿನಿಧಿಗಳು ಭಾಗವಹಿಸಿ ಅಳಿಯಕಟ್ಟು ಸಂಪ್ರದಾಯದ ವಿವಿಧ ಆಯಾಮಗಳ ಕುರಿತು ಚರ್ಚಿಸಿದರು.

ಈ ಕಾರ್ಯಕ್ರಮದಲ್ಲಿ ನಡೆದ ಎಲ್ಲ ಚರ್ಚೆಗಳನ್ನು ಭವಿಷ್ಯದ ದಾಖಲಾತಿಗಾಗಿ ವಿಡಿಯೊ ರೂಪದಲ್ಲಿ ಸಂಗ್ರಹಿಸಲಾಗಿದ್ದು, ಅವುಗಳನ್ನು ‘ಕುಲಾಲ ಡಿಜಿಟಲ್ ಮೀಡಿಯಾ’ ಯೂಟ್ಯೂಬ್ ವಾಹಿನಿಯಲ್ಲೂ ಪ್ರಸಾರ ಮಾಡಲಾಗಿದೆ.

ಕಾರ್ಯಕ್ರಮದ ಯಶಸ್ಸಿಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಗೋಪಾಲ ಸಾಲ್ಯಾನ್ ಕಣ್ವತೀರ್ಥ ಹಾಗೂ ಸಂಘದ ಪದಾಧಿಕಾರಿಗಳು ವಿಶೇಷ ಸಹಕಾರ ನೀಡಿದರು. ಈ ಕಾರ್ಯಕ್ರಮವು ಅಳಿಯಕಟ್ಟು ಸಂಪ್ರದಾಯದ ಮೂಲ ಆಚರಣೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

LEAVE A REPLY

Please enter your comment!
Please enter your name here