ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಭವ-2ಕೆ26 ಅಂತರ್ವಿಭಾಗಿಯ ಉತ್ಸವ

0
13

ಮಂಗಳೂರು : ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್‌ ವಿಭಾಗೀಯ ಉತ್ಸವ “ಉದ್ಭವ 2ಕೆ26” ಅನ್ನು ಸೆಪ್ಟೆಂಬರ್ 26, 2026 ರಂದು ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಉತ್ಸವದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾಣ್, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ತದನಂತರ ವಿಜಯ ಪಾತ್ರೆಗಳ ಅನಾವರಣ ನಡೆಯಿತು.

“ಕಿಡಿಯಿಂದ ವೈಭವದವರೆಗೆ” ಎಂಬ ಆಶಯದೊಂದಿಗೆ “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ಸೃಜನಶೀಲತೆ” ಎಂಬ ಕೇಂದ್ರ ವಿಷಯವನ್ನು ಆಧರಿಸಿ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗಗಳಿಗೆ ಸಂಬಂಧಿಸಿದ ಒಂದು ದಿನದ ಸ್ಪರ್ದೆಗಳು ನಡೆದವು.

ಕಾರ್ಯಕ್ರಮದ ಮುಖ್ಯಸ್ಥರು, ಉತ್ಸವ ಸಂಯೋಜಕರು, ವಿದ್ಯಾರ್ಥಿ ಸಂಯೋಜಕರು, ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರು ಉತ್ಸವದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕಿ ದೀಕ್ಷಿತಾ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕುಮಾರಿ ಶ್ರಾವ್ಯ ಜೆ. ಎಸ್. ನಿರೂಪಿಸಿದರು. ಕುಮಾರಿ ಅಪೂರ್ವ ಸ್ವಾಗತ ಭಾಷಣ ಮಾಡಿದರು ಹಾಗೂ ಶ್ರೀ ಭೂಷಣ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಉದ್ಘಾಟನೆಯ ನಂತರ ವಿವಿಧ ಸಂಘಗಳ ವತಿಯಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಸೃಜನಶೀಲತೆ, ಕೌಶಲ್ಯ ಹಾಗೂ ನವೀನ ಚಿಂತನೆಗಳನ್ನು ಪ್ರದರ್ಶಿಸುವ ಮೂಲಕ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.

ಸ್ಪರ್ಧೆಗಳ ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಲಾಯಿತು. ಜೊತೆಗೆ, ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಪ್ರಯತ್ನ ಮತ್ತು ಪ್ರತಿಭೆಯನ್ನು ಶ್ಲಾಘಿಸಲಾಯಿತು.

ಉದ್ಭವ 2026 ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಪ್ರತಿಭೆ, ನವೀನ ಚಿಂತನೆ ಹಾಗೂ ಕೌಶಲ್ಯಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಯಿತು. “ಒಂದು ಕಲ್ಪನೆಯ ಕಿಡಿಯಿಂದ ಸ್ಮರಣೀಯ ವೈಭವದವರೆಗೆ” ಎಂಬ ಆಶಯವನ್ನು ಸಾರ್ಥಕಗೊಳಿಸಿದ ಈ ಉತ್ಸವವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಹಕಾರ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು.