ರಾಷ್ಟ್ರಧ್ವಜದ ಗೌರವ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಶಾಲಾ-ಕಾಲೇಜುಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ‘ರಾಷ್ಟ್ರಧ್ವಜ ಗೌರವಿಸಿ’ ಪ್ರವಚನ

0
6

ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ಧ್ವಜ ಸಂಹಿತೆಯ ಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಪ್ರಮುಖ ಶಾಲಾ-ಕಾಲೇಜುಗಳಲ್ಲಿ ‘ರಾಷ್ಟ್ರಧ್ವಜ ಗೌರವಿಸಿ’ ಪ್ರವಚನಗಳನ್ನು ಆಯೋಜಿಸಲಾಗಿತ್ತು. ಕುದ್ರೋಳಿಯ ನಾರಾಯಣ ಗುರು ಶಾಲೆ, ತೊಕ್ಕೊಟ್ಟುವಿನ ಭಾರತಿ ಸ್ಕೂಲ್, ಪದವಿನ ಸ್ವಾಮಿ ಸದಾನಂದ ಸರಸ್ವತಿ ಪ್ರೌಢ ಶಾಲೆ, ಕೂಳೂರಿನ ಭಾರತಿ ಎಜುಕೇಶನ್ ಟ್ರಸ್ಟ್ ಶಾಲೆ ಹಾಗೂ ಅಂಕುರ್ ಪ್ರೌಢ ಶಾಲೆ, ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಪಿ.ಯು. ಕಾಲೇಜು ಮತ್ತು ಶಾಲೆ, ಶಾರದಾ ಸಿ.ಬಿ.ಎಸ್.ಇ. ಸ್ಕೂಲ್, ಬೆಸೆಂಟ್ ಸಂಧ್ಯಾ ಕಾಲೇಜು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ಪಂಜಿಕಲ್ಲು ಮೋಗರು ಶಾಲೆಯಲ್ಲಿ ಈ ಯಶಸ್ವಿ ಜಾಗೃತಿ ಪ್ರವಚನಗಳು ನಡೆದವು.

ರಾಷ್ಟ್ರಧ್ವಜವು ನಮ್ಮ ದೇಶದ ಅಭಿಮಾನ ಮತ್ತು ಗೌರವದ ಸಂಕೇತವಾಗಿದೆ. ಆದರೆ ಅಗಸ್ಟ್ 15 ಮತ್ತು ಜನವರಿ 26 ರ ಸಂಜೆಯ ವೇಳೆಗೆ ಧ್ವಜಗಳು ರಸ್ತೆಗಳಲ್ಲಿ ಅಥವಾ ಕಸದ ಬುಟ್ಟಿಯಲ್ಲಿ ಬಿದ್ದು ಅವಮಾನಕ್ಕೊಳಗಾಗುವುದನ್ನು ಕಾಣುತ್ತೇವೆ. ಇದನ್ನು ತಡೆಯಲು ಸಮಿತಿಯು ಕಳೆದ ಎರಡು ದಶಕಗಳಿಂದ ಶಾಲಾ-ಕಾಲೇಜುಗಳಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದು, ಇದರ ಫಲವಾಗಿ ಪ್ಲಾಸ್ಟಿಕ್ ಧ್ವಜಗಳ ಬಳಕೆ ಶೇಕಡಾ 95 ರಷ್ಟು ಕಡಿಮೆಯಾಗಿದೆ. 

ನಮ್ಮ ತ್ರಿವರ್ಣ ಧ್ವಜವನ್ನು ಪಿಂಗಾಲಿ ವೆಂಕಯ್ಯನವರು ವಿನ್ಯಾಸಗೊಳಿಸಿದ್ದು, ಇದನ್ನು ಧಾರವಾಡ ಜಿಲ್ಲೆಯ ಗರಗ ಮತ್ತು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಮಾತ್ರ ಅಧಿಕೃತವಾಗಿ ತಯಾರಿಸಲಾಗುತ್ತದೆ. ಧ್ವಜವು 2:3 ಪ್ರಮಾಣದಲ್ಲಿದ್ದು, ಹತ್ತಿ, ಖಾದಿ, ಉಣ್ಣೆ ಅಥವಾ ರೇಷ್ಮೆಯಿಂದಲೇ ತಯಾರಾಗಿರಬೇಕು. ಸೂರ್ಯೋದಯದ ನಂತರ ಏರಿಸಿ, ಸೂರ್ಯಾಸ್ತದ ಮೊದಲು ಗೌರವದಿಂದ ಇಳಿಸಬೇಕು; ಧ್ವಜಕ್ಕೆ ಯಾವುದೇ ರೀತಿಯ ಅವಮಾನ ಮಾಡಿದರೆ 3 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಅದೇ ರೀತಿ, ನಮ್ಮ ರಾಜಮುದ್ರೆಯಲ್ಲಿರುವ ಸಿಂಹಗಳು ಶೌರ್ಯ ಮತ್ತು ಪರಾಕ್ರಮದ ಪ್ರತೀಕವಾಗಿವೆ. ಕಾಗದ ಹಾಗೂ ಪ್ಲಾಸ್ಟಿಕ್ ಧ್ವಜಗಳನ್ನು ಖರಿದೀಸಿ ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಿ, ಲಕ್ಷಾಂತರ ದೇಶಭಕ್ತರ ಬಲಿದಾನದ ಪ್ರತೀಕವಾದ ರಾಷ್ಟ್ರಧ್ವಜದ ಗೌರವವನ್ನು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.