ಉಪ್ಪೂರು : ಪೈಪ್‌ಲೈನ್ ಕಾಮಗಾರಿಯಿಂದ ಹಾಳಾದ ರಸ್ತೆ; ದುರಸ್ತಿಗೆ ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಕೀಳಂಜೆ ಆಗ್ರಹ

0
4

ಬ್ರಹ್ಮಾವರ: ತಾಲೂಕಿನ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿನಿ ಡೈರಿಗೆ ಹಾಗೂ ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಾರಾಹಿ ನೀರಾವರಿ ಯೋಜನೆಗೆ ಸಂಬಂಧಿಸಿದ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಯ ಮಧ್ಯಭಾಗವನ್ನು ಸಂಪೂರ್ಣವಾಗಿ ಕಟ್ ಮಾಡಲಾಗಿದೆ. ಪರಿಣಾಮ ಸುಮಾರು ಎರಡು ಅಡಿ ಆಳದ ಹೊಂಡ ನಿರ್ಮಾಣವಾಗಿದ್ದು, ಸುಮಾರು ಐದು ಅಡಿ ಅಗಲದ ರಸ್ತೆಯ ಭಾಗ ಮಳೆನೀರಿನಿಂದ ಕೆಸರುಮಯವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ರಾತ್ರಿ ಹಾಗೂ ಹಗಲು ಸಮಯದಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗಾಲ ಆರಂಭಕ್ಕೂ ಮುನ್ನವೇ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಕತ್ತರಿಸಲಾಗಿದೆ. ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾದ ರಸ್ತೆಯನ್ನು ಸಮರ್ಪಕ ಯೋಜನೆಯಿಲ್ಲದೆ ಹಾಳು ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಹಾಳಾಗಿ ಹಲವು ದಿನಗಳು ಕಳೆದರೂ ಇದನ್ನು ದುರಸ್ತಿಪಡಿಸುವ ಕುರಿತು ಉಪ್ಪೂರು ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ವಾರಾಹಿ ನೀರಾವರಿ ಯೋಜನೆಯ ಅಧಿಕಾರಿಗಳು ಹಾಗೂ ಪೈಪ್‌ಲೈನ್ ಕಾಮಗಾರಿ ನಡೆಸಿದ ಗುತ್ತಿಗೆದಾರರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ರಸ್ತೆಯನ್ನು ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಬಳಸುತ್ತಿದ್ದು, ಹೊಂಡ ಮತ್ತು ಕೆಸರಿನಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ರಸ್ತೆ ದುರಸ್ತಿ ಮಾಡದಿದ್ದರೆ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

ರಸ್ತೆಯನ್ನು ಕತ್ತರಿಸಿದವರು ಯಾರು ಎಂಬುದನ್ನು ಸಂಬಂಧಪಟ್ಟ ಇಲಾಖೆ ಪರಿಶೀಲಿಸಿ, ಕೂಡಲೇ ರಸ್ತೆ ಮರುನಿರ್ಮಾಣ ಹಾಗೂ ಡಾಂಬರೀಕರಣ ಮಾಡಬೇಕು. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜನರ ಬಳಿಗೆ ಬರುವ ಜನಪ್ರತಿನಿಧಿಗಳು ಇಂತಹ ಮೂಲಭೂತ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ರಸ್ತೆ ಹಾಳಾಗಿರುವ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮೌನ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

“ಜನರ ಸಂಚಾರಕ್ಕೆ ಪ್ರಮುಖವಾಗಿರುವ ಈ ರಸ್ತೆಯನ್ನು ಕೂಡಲೇ ಸುಸಜ್ಜಿತವಾಗಿ ದುರಸ್ತಿಪಡಿಸಿ, ಡಾಂಬರೀಕರಣ ಮಾಡಬೇಕು. ಸಾರ್ವಜನಿಕರ ಹಾಗೂ ವಾಹನ ಸವಾರರ ಸುರಕ್ಷತೆಯನ್ನು ಕಡೆಗಣಿಸಬಾರದು” ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜೆ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.