ಕೀಳಂಜೆ ಬೊಬ್ಬರ್ಯ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕೆ ಆರೋಡ ಪ್ರಶ್ನೆ: ಮೂರು ವರ್ಷದೊಳಗೆ ನಾಗಬ್ರಹ್ಮಸ್ಥಾನ ಪುನರ್ ನಿರ್ಮಾಣಕ್ಕೆ ಸೂಚನೆ

0
52

ಹಾವಂಜೆ: ಸ್ವರ್ಣ ನದಿ ತಟದಲ್ಲಿರುವ ಹಾವಂಜೆ ಗ್ರಾಮದ ಕೀಳಂಜೆಯ ಪ್ರಸಿದ್ಧ ಶ್ರೀ ಸ್ವಾಮಿ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಆರೋಡ ಪ್ರಶ್ನೆ ಚಿಂತನೆಯನ್ನು ನಡೆಸಲಾಯಿತು.

ಖ್ಯಾತ ಜ್ಯೋತಿಷಿ ತೋನ್ಸೆ ಶ್ರೀ ಹಯವದನ ಭಟ್ ಅವರ ನೇತೃತ್ವದಲ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಆರೋಡ ಪ್ರಶ್ನೆಯಲ್ಲಿ ಕೀಳಂಜೆ ಶ್ರೀ ಹರಿಹರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರವೀಂದ್ರ ಭಟ್ ಉಪಸ್ಥಿತರಿದ್ದರು.

ನಾಗಬ್ರಹ್ಮಸ್ಥಾನದ ಪುನರ್ ನಿರ್ಮಾಣಕ್ಕೆ ಸೂಚನೆ

ಆರೋಡ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ವಿಚಾರಗಳ ಪ್ರಕಾರ, ದೈವಸ್ಥಾನಕ್ಕೆ ಸಂಬಂಧಿಸಿದ ಕೆಲವು ದೋಷಗಳ ನಿವಾರಣೆಗಾಗಿ ಪ್ರಾಯಶ್ಚಿತ್ತ ಕಾರ್ಯಗಳನ್ನು ಕೈಗೊಳ್ಳಬೇಕು. ಗ್ರಾಮದ ದೇವರ ಸಾನಿಧ್ಯದಲ್ಲಿ ಬೊಬ್ಬರ್ಯ ಅಭಿವೃದ್ಧಿ ಸಮಿತಿಯ ವತಿಯಿಂದ ಮೃತ್ಯುಂಜಯ ಹೋಮ, ಅಘೋರ ಹೋಮ, ಮುಷ್ಠಿ ಕಾಣಿಕೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದೋಷ ನಿವಾರಣೆ ಮಾಡಬೇಕೆಂದು ತಿಳಿಸಲಾಯಿತು.

ಅಲ್ಲದೆ, ಕೀಳಂಜೆಯ ಗೋಣಕಟ್ಟ ಪ್ರದೇಶದಲ್ಲಿರುವ ಸ್ವರ್ಣ ನದಿ ತಟದ ನಿಧಿ ಸಂಬಂಧಿತ ಚಿತ್ರಕೂಟ ನಾಗಬ್ರಹ್ಮಸ್ಥಾನ ಹಾಗೂ ಪರಿವಾರ ದೇವತೆಗಳ ಸಾನಿಧ್ಯವನ್ನು ಪುನರ್ ನಿರ್ಮಿಸಿ, ಮುಂದಿನ ಮೂರು ವರ್ಷಗಳೊಳಗೆ ಪ್ರತಿಷ್ಠಾ ಕಾರ್ಯ ನಡೆಸಬೇಕೆಂದು ಪ್ರಶ್ನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಲಾಯಿತು.

ಶ್ರೀ ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ಗ್ರಾಮಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದೆ ಎಂಬ ವಿಚಾರವೂ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿವರ್ಷ ಶ್ರೀ ಹರಿಹರ ದೇವಸ್ಥಾನದ ವಠಾರದಲ್ಲಿರುವ ನಾಗಸಾನಿಧ್ಯದಲ್ಲಿ ಗ್ರಾಮದ ಸಮಸ್ತ ಜನರು ಒಂದು ದಿನ ಸಾಮೂಹಿಕವಾಗಿ ಪೂಜೆ ಸಲ್ಲಿಸಬೇಕೆಂಬ ಸೂಚನೆಯನ್ನೂ ನೀಡಲಾಗಿದೆ.

ಗ್ರಾಮದ ಧಾರ್ಮಿಕ ಆಚರಣೆಗಳ ಪಾಲನೆಗೆ ಒತ್ತು

ಗ್ರಾಮದ ದೈವಗಳಿಗೆ ಪೂಜೆ ಹಾಗೂ ಕಾಣಿಕೆ ಸಮರ್ಪಿಸುವುದರ ಜೊತೆಗೆ ಸ್ವರ್ಣ ನದಿ ತಟದಲ್ಲಿರುವ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ದೀಪ ಸಮರ್ಪಣೆ ಮತ್ತು ಹೂವಿನ ಪೂಜೆ, ಸ್ಥಳೀಯ ಗದ್ದಿಗೆ ಅಮ್ಮನಿಗೆ ಹಣ್ಣುಕಾಯಿ ಪೂಜೆ ಹಾಗೂ ಕಾಣಿಕೆ ಸಲ್ಲಿಸುವ ವಿಧಿವಿಧಾನಗಳನ್ನೂ ನೆರವೇರಿಸಬೇಕೆಂದು ತಿಳಿಸಲಾಗಿದೆ.

ಶ್ರೀ ಹರಿಹರ ದೇವಸ್ಥಾನದ ವತಿಯಿಂದ ವರ್ಷದಲ್ಲಿ ನಾಲ್ಕು ಬಾರಿ ನಡೆಯುವ ಮಾರಿಪೂಜೆಯ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯವರು ಭಾಗವಹಿಸಿ, ದೇವಸ್ಥಾನದಿಂದ ಪ್ರಸಾದ ಪಡೆದು ಮಾರಿ ಆಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ. ಮಾರಿಗಡಿ ಆಚರಣೆಯ ಸಂದರ್ಭದಲ್ಲಿ ತೆಂಗಿನಕಾಯಿ, ಚರ್ವ ಹಾಗೂ ಕೋಳಿ ತಂದು ಸಂಪ್ರದಾಯದಂತೆ ಸೇವೆ ಸಲ್ಲಿಸುವುದು ಸೇರಿದಂತೆ ಆಚರಣೆಯ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಲಾಗಿದೆ.

ಇದಲ್ಲದೆ, ಶ್ರೀ ನಂದಿಗೋಣ ಹಾಗೂ ಪರಿವಾರ ದೈವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಬ್ರಾಹ್ಮಣರ ಮುಖಾಂತರ ಪೂಜಾ ವಿಧಿವಿಧಾನಗಳು ನಡೆಯಬೇಕು ಎಂಬ ವಿಚಾರವೂ ಪ್ರಶ್ನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಲಾಯಿತು.

ಸಮಗ್ರ ಜೀರ್ಣೋದ್ಧಾರಕ್ಕೆ ಭಕ್ತರ ಸಹಕಾರಕ್ಕೆ ಮನವಿ

ಗ್ರಾಮದ ಪ್ರಧಾನ ದೈವ ಸ್ವಾಮಿ ಬೊಬ್ಬರ್ಯ, ನೀಚ ದೈವ ಹಾಗೂ ನಂದಿಗೋಣ ಶಕ್ತಿಗಳ ಪುನರ್ ಪ್ರತಿಷ್ಠೆ ಕಾರ್ಯಗಳನ್ನು ಪ್ರಾಯಶ್ಚಿತ್ತ ವಿಧಿವಿಧಾನಗಳ ಬಳಿಕ ಕೈಗೊಂಡು ಸಮಗ್ರ ಜೀರ್ಣೋದ್ಧಾರ ನಡೆಸಬೇಕೆಂದು ಆರೋಡ ಪ್ರಶ್ನೆಯಲ್ಲಿ ತಿಳಿಸಲಾಗಿದೆ.

ಈ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಗೊಳಿಸಲು ಊರಿನ ಹಾಗೂ ಪರವೂರಿನ ಭಕ್ತಾಭಿಮಾನಿಗಳು ಸಹಕಾರ ನೀಡುವಂತೆ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮುಖ್ಯಸ್ಥ ಸುಂದರ್ ಶೆಟ್ಟಿ (ಅದಪ್ಪ), ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಕಾರ್ಯದರ್ಶಿ ರಾಮಚಂದ್ರ ನಾಯಕ್ ಕೀಳಂಜೆ, ಕೋಶಾಧಿಕಾರಿ ವಿಕ್ರಾಂತ್ ಶೆಟ್ಟಿ ಕೀಳಂಜೆ, ಸಮಿತಿಯ ಸದಸ್ಯರು, ಊರಿನ ಹಿರಿಯರು, ಪ್ರಮುಖರು, ಮಹಿಳಾ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ನ.24ರಂದು ಕಾಲಾವಧಿ ಕೋಲ ನೇಮೋತ್ಸವ

ಇದೇ ನವೆಂಬರ್ 24ರಂದು ಸ್ವರ್ಣ ನದಿ ತಟದಲ್ಲಿರುವ ಕೀಳಂಜೆ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಕಾಲಾವಧಿ ಕೋಲ ನೇಮೋತ್ಸವ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ವಿನಂತಿಸಿದ್ದಾರೆ.